ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ 2618 ಅತಿಥಿ ಶಿಕ್ಷಕರ ನೇಮಕಾತಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಿ ಮಂಜುರಾತಿ ಆದೇಶ ನೀಡಲಾಗಿದೆ.
ಪ್ರಾಥಮಿಕ ಶಾಲೆಯ ಅಕ್ಷರ ಮಿತ್ರ ಅತಿಥಿ ಶಿಕ್ಷಕರಿಗೆ 10,000 ರೂ., ಪ್ರೌಢಶಾಲೆ ಅಕ್ಷರ ಮಿತ್ರ ಅತಿಥಿ ಶಿಕ್ಷಕರಿಗೆ 10,500 ರೂ. ಗೌರವ ಧನ ನೀಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಮಂಡಳಿ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಅಪಾರ ಆಯುಕ್ತ ಡಾ. ಆಕಾಶ್ ಅವರಿಗೆ ಮಂಜೂರಾತಿ ಆದೇಶ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರ ಕಾಯಂ ಮತ್ತು ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ ನಂತರವೂ ಶಿಕ್ಷಕರ ಕೊರತೆ ಕಂಡು ಬಂದಿದೆ. ಹೆಚ್ಚುವರಿಯಾಗಿ ಬೇಡಿಕೆ ಇರುವ 2618 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆಗೆ ಮಂಜೂರಾತಿ ಆದೇಶ ನೀಡಲಾಗಿದ್ದು, ಇದಕ್ಕಾಗಿ 18.34 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಅಜಯ್ ಸಿಂಗ್ ತಿಳಿಸಿದ್ದಾರೆ.
ಮಂಡಳಿಯಿಂದ ಈ ಬಾರಿ ಶಿಕ್ಷಣಕ್ಕೆ ಶೇಕಡ 25 ರಷ್ಟು ಅನುದಾನ ಮೀಸಲಿಡಲಿದ್ದು, ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು. ಯಾವ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.