ಬೆಂಗಳೂರು : ನಾನು ವಿವಾದಾತ್ಮಕ ಹೇಳಿಕೆ ನೀಡಿಲ್ಲ, ಧರ್ಮಗಳ ವ್ಯತ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದೆ ಅಷ್ಟೇ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಸನಾತನ ಧರ್ಮದ ಬಗ್ಗೆ ಪರಮೇಶ್ವರ್ ಹೇಳಿಕೆ ವಿವಾದವಾಗುತ್ತಿದ್ದಂತೆ ಗೃಹ ಸಚಿವ ಜಿ. ಪರಮೇಶ್ವರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿರಲಿಲ್ಲ, ನಾನು ಧರ್ಮಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದೆ ಅಷ್ಟೇ,,,,ಜೈನ ಧರ್ಮ, ಬೌದ್ಧ ಧರ್ಮ, ಹಿಂದೂ ಧರ್ಮದ ಬಗ್ಗೆ ಹೇಳಿದ್ದೆ.’ ಎಂದು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಹೇಳಿಕೆಯಲ್ಲಿ ಯಾವುದೇ ವಿವಾದವಿಲ್ಲ, ತಪ್ಪು ಹೇಳಿಕೆ ನೀಡಿಲ್ಲ. ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. ಹಿಂದೂ ಧರ್ಮದ ಬಗ್ಗೆ ನನಗಿರುವಷ್ಟು ಗೌರವ ಬಿಜೆಪಿಯವರಿಗೆ ಇಲ್ಲ, ರಾಜಕೀಯ ವಿಚಾರಕ್ಕೆ ಈ ತರ ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.
ಏನಿದು ಪರಮೇಶ್ವರ್ ವಿವಾದ..?
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪರಮೇಶ್ವರ್ ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಹಿಂದೂ ಧರ್ಮವನ್ನು ಯಾರು ಹುಟ್ಟಿಸಿದರು? ಯಾವಾಗ ಹುಟ್ಟಿದ್ದು ಎಂಬ ಬಗ್ಗೆ ಇನ್ನೂ ಪ್ರಶ್ನಾರ್ಥಕ ಚಿಹ್ನೆ ಇದೆ. ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ ಎಂದು ಹೇಳಿದ್ದರು.ನಮ್ಮ ದೇಶದಲ್ಲಿ ಬೌದ್ಧ ಧರ್ಮ ಹಾಗೂ ಜೈನ ಧರ್ಮ ಹುಟ್ಟಿವೆ. ಹೊರಗಡೆಯಿಂದ ಇಸ್ಲಾಂ ಧರ್ಮ ಹಾಗೂ ಕ್ರೈಸ್ತ ಧರ್ಮ ಬಂದಿವೆ. ಮನುಕುಲಕ್ಕೆ ಒಳ್ಳೆಯದಾಗಬೇಕೆಂಬುದೇ ಎಲ್ಲಾ ಧರ್ಮಗಳ ಸಾರವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.