ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ ಏನು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಜಲದರ್ಶನಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ಹೈಡ್ರಾಮಾ ನಡೆದಿದೆ.
ಮೈಸೂರಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಕಾರ್ಯಕ್ರಮವೊಂದರಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹರನ್ನು ಸೋಲಿಸಬೇಕು ಎಂದು ಕರೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಾಪ್ ಸಿಂಹ ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಕೊಡುಗೆ ಏನು? ಎಂದು ಪ್ರಶ್ನಿಸಿದ್ದರು.
ಸಂಸದ ಪ್ರತಾಪ್ ಸಿಂಹ ಪ್ರಶ್ನೆಗೆ ದಾಖಲೆ ಸಮೇತ ಉತ್ತರಿಸುವುದಾಗಿ ಹೇಳಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಬಹಿರಂಗ ಚರ್ಚೆ ಬರಬೇಕು. ನಾನು ಸಿಎಂ ಸಿದ್ದರಾಮಯ್ಯ ಸಾಧನೆಯ ದಾಖಲೆಗಳನ್ನು ತರುತ್ತೇನೆ. ನೀವು ನಿಮ್ಮ ಸಾಧನೆಯ ಬಗ್ಗೆ ಚರ್ಚೆ ಮಾಡಿ ಎಂದು ಸವಾಲು ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಜಲದರ್ಶಿನಿಯಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಪ್ರತಾಪ್ ಸಿಂಹ ಅವರನ್ನು ಕರೆಯಲಾಗಿತ್ತು. ಆದರೆ ಪ್ರತಾಪ್ ಸಿಂಹ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ್ ಸಿಂಹ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದಾರೆ.