ಬೆಂಗಳೂರು : ಉಚಿತ ಬಸ್ ಪ್ರಯಾಣ ಯೋಜನೆ ( Free Bus Service) ಜಾರಿಯಾದ ಮೊದಲ ದಿನ ಬಸ್ ಮೆಟ್ಟಿಲಿಗೆ ನಮಸ್ಕರಿಸಿ ಬಸ್ ಹತ್ತಿದ ಅಜ್ಜಿ ಫೋಟೋ ಭಾರಿ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ( Social Media) ವ್ಯಾಪಕ ಮೆಚ್ಚುಗೆಗೆ ಕೂಡ ವ್ಯಕ್ತವಾಗಿತ್ತು.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ನೆನಪಿನಲ್ಲಿ ಉಳಿಯುವ ಚಿತ್ರ ಇದು ಎಂದು ಟ್ವೀಟ್ ಮಾಡಿದ್ದರು. ಇದೀಗ ಆ ಅಜ್ಜಿಯನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.ಖಾಸಗಿ ವಾಹಿನಿ ಕಲರ್ಸ್ ಕನ್ನಡ ಪ್ರತಿ ವರ್ಷ ಆಚರಿಸುವ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಈ ವೇಳೆ ಕಲರ್ಸ್ ಕನ್ನಡ ವಾಹಿನಿಯವರು, ಸಂಗವ್ವ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಈ ವೇಲೆ ಸರ್ಪೈಸ್ ಎಂಬಂತೆ ಸಿಎಂ ಮಾತನಾಡುವಾಗ ಸಂಗವ್ವ ಅವರನ್ನು ಸಿಎಂ ಎದುರು ನಿಲ್ಲಿಸಿದ್ದಾರೆ.
ಪೋಸ್ಟ್ ಮಾಡಿದ ಸಿಎಂ ಸಿದ್ದರಾಮಯ್ಯ
ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಇಂದು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜೊತೆಗೆ ಸಾರ್ಥಕ್ಯದ ಭಾವ ಮೂಡಿಸಿತು. ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು. ಈ ದಿನ ಇಂಥದ್ದೊಂದು ಭೇಟಿಯ ಅವಕಾಶ ಕಲ್ಪಿಸಿದ@ColorsKannada ವಾಹಿನಿಗೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.