ಲಖನೌ: ಪೊಲೀಸ್ ಕಮಿಷ್ನರ್ ಕಚೇರಿಯಲ್ಲಿಯೇ ಮಹಿಳಾ ಕಾನ್ಸ್ ಟೇಬಲ್ ಓರ್ವರಿಗೆ ಹೆಡ್ ಕಾನ್ಸ್ ಟೇಬಲ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಉತ್ತರಪ್ರದೇಶದ ಲಖನೌನಲ್ಲಿ ಈ ಘಟನೆ ನಡೆದಿದ್ದು, ರಕ್ಷಾಬಂಧನ ಹಬ್ಬದ ದಿನವೇ ಹೆಡ್ ಕಾನ್ಸ್ ಟೇಬಲ್, ಮಹಿಳಾ ಕಾನ್ಸ್ ಟೇಬಲ್ ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಕಾನ್ಸ್ ಟೇಬಲ್ ದೂರು ನೀಡಿದ್ದಾರೆ.
ಬಾರಾಬಂಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್ ಟೇಬಲ್ ಗೆ ಲಖನೌಗೆ ವರ್ಗಾವಣೆಯಾಗಿತ್ತು. ರಕ್ಷಾಬಂಧನದ ದಿನ, ತನ್ನ ಕರ್ತವ್ಯಕ್ಕೆ ಹಾಜರಾಗಲು ಕಮಿಷ್ನರ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅಲ್ಲಿನ ಹೆಡ್ ಕಾನ್ಸ್ ಟೇಬಲ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳಾ ಕಾನ್ಸ್ ಟೇಬಲ್ ದೂರು ನೀಡಿದ್ದಾರೆ. ದೂರಿನ ಅನ್ವಯ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆಂತರಿಕ ಸಮಿತಿ ತನಿಖೆ ನಡೆಸುತ್ತಿದೆ.
ಕರ್ತವ್ಯಕ್ಕೆ ಹಾಜರಾಗಲು ಕಚೇರಿಗೆ ಆಗಮಿಸಿದ್ದ ಮಹಿಳಾ ಕಾನ್ಸ್ ಟೇಬಲ್ ಗೆ ಹೆಡ್ ಕಾನ್ಸ್ ಟೇಬಲ್ ಕುರ್ಚಿ ಮೇಲೆ ಕೂರುವಂತೆ ಹೇಳಿದ್ದಾರೆ. ನಂತರ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಬಯಸಿದ ಪೋಸ್ಟಿಂಗ್ ನೀಡುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಘಟನೆ ಬಳಿಕ ಸಂತ್ರಸ್ತ ಮಹಿಳಾ ಕಾನ್ಸ್ ಟೇಬಲ್ ಅಲ್ಲಿಂದ ಮೌನವಾಗಿ ಹೊರಟು ಬಂದು ಮೇಲಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಘಟನೆ ಬಗ್ಗೆ ದೂರು ನೀಡಿದರೂ ಹೆಡ್ ಕಾನ್ಸ್ ಟೇಬಲ್ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಮಹಿಳಾ ಕಾನ್ಸ್ ಟೇಬಲ್ ಆರೋಪಿಸಿದ್ದಾರೆ.