ಬೆಂಗಳೂರು : ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬೆಳೆಹಾನಿಯಾಗಿದ್ದು, ಇಡೀ ಕರುನಾಡನ್ನೇ ‘ಬರ’ ಸಿಡಿಲು ಆವರಿಸಿದೆ. ರೈತರು ಆಕಾಶದತ್ತ ಮುಖ ನೋಡುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ತಾಲೂಕುಗಳಲ್ಲಿ ಬರ ಘೋಷಣೆ ಮಾಡಲು ಸಿದ್ದತೆ ನಡೆಸಿದ್ದು, ನಾಳೆ ಅಧಿಕೃತವಾಗಿ ಘೋಷಣೆ ಮಾಡಲಿದೆ.
ಹೌದು, ಸೆ.4 ರಂದು ಸೋಮವಾರ ಬರ ಪೀಡಿತ ತಾಲೂಕುಗಳ ಪಟ್ಟಿಯನ್ನು ಘೋಷಣೆ ಮಾಡಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆ ಬೀಳುವ ವಿಶ್ವಾಸವಿತ್ತು. ಆದರೆ ಈ ಆಗಸ್ಟ್ ನಲ್ಲಿ ಶೇ.99ರಷ್ಟು ಮಳೆ ಕೊರತೆಯಾಗಿದೆ. ತೀವ್ರ ಬರಪೀಡಿತ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಬೆಳೆ ಪರಿಸ್ಥಿತಿ ಸಮೀಕ್ಷೆ ಪೂರ್ಣಗೊಂಡಿದೆ. ಆಗಸ್ಟ್ 30 ರಂದು ವರದಿಯೂ ಸಲ್ಲಿಕೆಯಾಗಿದೆ. ಈ ಮಾನದಂಡಗಳ ಆಧಾರದ ಮೇಲೆ ಸೆಪ್ಟೆಂಬರ್ 4 ರಂದು ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಬರ ತಾಲೂಕುಗಳ ಪಟ್ಟಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಯಾವ ಯಾವ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ ಅವುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಘೋಷಣೆಗೆ ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಹಲವು ಕಡೆ ಮಳೆ ಇಲ್ಲದೇ ಬೆಳೆ ಒಣಗುತ್ತಿದ್ದು, ಸಾಲಬಾಧೆಗೆ ರೈತರು ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ.ಈ ಹಿನ್ನೆಲೆ ಸರ್ಕಾರ ತಾಲೂಕುಗಳಲ್ಲಿ ಬರ ಘೋಷಣೆ ಮಾಡಲು ಸಿದ್ದತೆ ನಡೆಸಿದ್ದು, ನಾಳೆ ಅಧಿಕೃತವಾಗಿ ಘೋಷಣೆ ಮಾಡಲಿದೆ.