ಚೆನ್ನೈ: ಭಾರತದಲ್ಲಿ ಹಲವಾರು ಶೈಲಿಯ ಸಾರ್ವಜನಿಕ ಸಾರಿಗೆಗಳು ಲಭ್ಯವಿದೆ. ಅದರಲ್ಲಿ ಮೂರು ಚಕ್ರಗಳ ಆಟೋಗಳು ಸಹ ಪ್ರಮುಖ ಸಾರ್ವಜನಿಕ ಸಾರಿಗೆ ವಾಹನಗಳಾಗಿವೆ. ಈ ಆಟೋಗಳನ್ನು ಸಾಮಾನ್ಯವಾಗಿ ಸರಳವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ, ಅವುಗಳ ಮಾಲೀಕರು ಕೆಲವೊಮ್ಮೆ ಈ ವಾಹನಗಳಿಗೆ ತಮ್ಮದೇ ಶೈಲಿಯ ಬದಲಾವಣೆಯನ್ನು ನೀಡುತ್ತಾರೆ.
ಆಟೋವೊಂದರ ವಿಶಿಷ್ಟ ವಿಡಿಯೋಗಳು ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ. ಚೆನ್ನೈನ ಆಟೋ ಚಾಲಕ ಕುಬೇಂದಿರನ್ ತನ್ನ ತ್ರಿಚಕ್ರ ವಾಹನಕ್ಕೆ ಗಿಡಗಳು, ಪುಸ್ತಕಗಳು ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಅಳವಡಿಸಿಕೊಂಡಿದ್ದಾರೆ. ಅಂಗಾಂಗ ದಾನ ಮತ್ತು ಪರಿಸರ ಸಂರಕ್ಷಣೆಯನ್ನು ಬೆಂಬಲಿಸುವಂತೆ ಪೋಸ್ಟರ್‌ಗಳನ್ನು ಸಹ ಅವರು ಹಾಕಿದ್ದಾರೆ.
ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ವಿಶೇಷವಾಗಿ ವಿನ್ಯಾಸಗೊಳಿಸಿದ ಈ ಆಟೋದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಇದುವರೆಗೆ 1.8 ಲಕ್ಷ ಲೈಕ್‌ಗಳನ್ನು ಸಂಗ್ರಹಿಸಿದೆ. ಇದು ಟ್ರಾವೆಲಿಂಗ್ ಪಾರ್ಕ್, ಅದ್ಭುತವಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ರೆ ಮತ್ತೊಬ್ಬರು, ಇದು ರಿಕ್ಷಾ ಅಲ್ಲ ಇದು ಮಿನಿ ಗಾರ್ಡನ್ ಎಂದು ಬರೆದಿದ್ದಾರೆ.
ಈ ಹಿಂದೆ ದೆಹಲಿಯ ಮಹೇಂದ್ರ ಕುಮಾರ್ ಕೂಡ ತಮ್ಮ ಆಟೋವನ್ನು ಇದೇ ರೀತಿ ಪರಿಸರ ಸ್ನೇಹಿಯಾಗಿ ವಿನ್ಯಾಸಗೊಳಿಸಿದ್ದರು. ಕುಮಾರ್ ತಮ್ಮ ಆಟೋ ಛಾವಣಿಯ ಮೇಲೆ ಪುಟ್ಟ ತೋಟವನ್ನು ಬೆಳೆಸಿದ್ದಾರೆ. ಈ ಉದ್ಯಾನವು ಚಾಲಕ ಮತ್ತು ಪ್ರಯಾಣಿಕರನ್ನು ಸೂರ್ಯನ ಬೆಳಕಿನಿಂದ ರಕ್ಷಿಸುತ್ತದೆ. ಅಲ್ಲದೆ, ವಾಹನದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಕುಮಾರ್ ಈ ವಿನೂತನ ಕಲ್ಪನೆಯನ್ನು ಮೊದಲು 2020ರಲ್ಲಿ ಜಾರಿಗೆ ತಂದರು.