ಚಿತ್ರದುರ್ಗ : ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ರಾತ್ರಿಯ ಬದಲು ಹಗಲು ವೇಳೆಯಲ್ಲಿ ವಿದ್ಯುತ್ ಸರಬರಾಜು ಪೂರೈಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಕೃಷಿ ತಜ್ಞರು, ಪ್ರಗತಿಪರ ಕೃಷಿಕರು, ಕೃಷಿ ಸಾಧಕರು ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಸಚಿವರು, ಸರ್ಕಾರ ರೈತರ ಪರವಿದೆ. ರೈತರು ಸಲ್ಲಿಸಿರುವ ಮನವಿ, ಸಲಹೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿ, ಸಮಸ್ಯೆಯನ್ನು ಸಂಪೂರ್ಣ ವಿಮರ್ಶೆ ಮಾಡಿ, ಶೇ.100ರಷ್ಟು ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬೆಳೆವಿಮೆ ನೋಂದಣಿಗಾಗಿ ರೈತರು ರೂ.1265 ಕೋಟಿ ಹಣ ಪಾವತಿಸಿ ಬೆಳೆ ವಿಮಾ ಕಂತು ಹಣ ಪಾವತಿಸಿದ್ದಾರೆ. ರೂ.8661 ಕೋಟಿ ಹಣ ರೈತರಿಗೆ ಮರುಪಾವತಿಯಾಗಿದೆ. ಹೀಗಾಗಿ ಒಟ್ಟು 7396 ಕೋಟಿ ರೂ. ಹಣ ಬೆಳೆವಿಮೆಯಿಂದ ಸಿಕ್ಕಿದಂತಾಗಿದೆ. ಬೆಳೆವಿಮೆಯ ಮಾನದಂಡಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳ ಜೊತೆ ಚರ್ಚಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು. ಜಿಲ್ಲಾಮಟ್ಟದ ಸಮಸ್ಯೆಗಳನ್ನು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಬಗೆಹರಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ರೂ.3 ಲಕ್ಷದಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲಸೌಲಭ್ಯ ನೀಡುತ್ತಿದ್ದು, ರೂ.15 ಲಕ್ಷದವರೆಗೂ ಶೇ.3ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು.