ಮಳೆಗಾಲವಾದರೂ ಈ ಬಾರಿ ಬಿಸಿಲ ಧಗೆ ಹೆಚ್ಚು. ಬೇಸಿಗೆಯನ್ನು ನೆನಪಿಸುವ ಈ ವಾತಾವರಣದಲ್ಲಿ ತಣ್ಣನೆಯ ನೀರೊಂದಿದ್ದರೆ ಸಾಕು ಅನಿಸದೆ ಇರದು. ಕುಡಿಯುವ ನೀರು ಹೆಚ್ಚು ತಂಪಾಗಿ, ಪರಿಮಳಯುಕ್ತವಾಗಿ ಇರಬೇಕೆಂದರೆ ನೈಸರ್ಗಿಕವಾಗಿ ಸಿಗುವ ಲಾವಂಚದ ಬೇರು ಒಂದು ವರದಾನವೇ ಸರಿ.
ಹುಲ್ಲಿನ ಜಾತಿಗೆ ಸೇರಿದ ಸಸ್ಯ ಲಾವಂಚ. ಕುಡಿಯುವ ನೀರಿನಲ್ಲಿ ಒಂದೆರಡು ಗಂಟೆ ನೆನೆಸಿ ನಂತರ ಶೋಧಿಸಿ ಕುಡಿಯಬಹುದು. ನೀರನ್ನು ಕುದಿಸಿ ಕುಡಿಯುವ ಅಭ್ಯಾಸ ಇರುವವರು ನೀರಿನ ಜೊತೆಗೆ ಲಾವಂಚದ ಬೇರನ್ನೂ ಸೇರಿಸಿ ಕುದಿಸಿ, ಶೋಧಿಸಿ ಕುಡಿಯಬಹುದು.
ದೇಹದಲ್ಲಿ ನಿರ್ಜಲೀಕರಣ ಆಗದ ಹಾಗೆ ತಡೆಗಟ್ಟುವ ಲಾವಂಚ, ರಕ್ತವನ್ನೂ ಶುದ್ಧಿ ಮಾಡುವ ವಿಶೇಷ ಗುಣವಿದೆ. ಉರಿ ಮೂತ್ರದ ಸಮಸ್ಯೆ ಇರುವವರು ನಿಯಮಿತವಾಗಿ ಲಾವಂಚದ ನೀರು ಕುಡಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತದೆ.
ಮನೆಯ ಮುಂದೆ ಸ್ವಲ್ಪ ಜಾಗದಲ್ಲೇ ಸುಲಭವಾಗಿ ಲಾವಂಚವನ್ನು ಬೆಳೆದು, ನಿತ್ಯ ಉಪಯೋಗಿಸಿ ಆರೋಗ್ಯ ಹೊಂದಿ.