ಬೆಂಗಳೂರು: ಆಗಸ್ಟ್ ನಲ್ಲಿ 25 ಲಕ್ಷಕ್ಕೂ ಅಧಿಕ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಅವರ ಖಾತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ಹಣ ಜಮಾ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರ ಖಾತೆಗೆ ಆಗಸ್ಟ್ ತಿಂಗಳಲ್ಲಿ ಎರಡನೇ ಕಂತಿನ ಹಣ ಜಮೆ ಮಾಡಲಾಗುತ್ತಿದೆ. 1.03 ಕೋಟಿ ಕಾರ್ಡ್ ಗಳಲ್ಲಿ 3.69 ಕೋಟಿ ಫಲಾನುಭವಿಗಳಿಗೆ 606 ಕೋಟಿ ರೂ. ಜಮಾ ಮಾಡಲಾಗಿದೆ.
ಆಗಸ್ಟ್ ನಲ್ಲಿ 25 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದ್ದು, ಯೋಜನೆಯಡಿ ಒಟ್ಟು ಶೇಕಡ 87 ರಷ್ಟು ಫಲಾನುಭವಿಗಳಿಗೆ ಹಣ ದೊರೆತಿದೆ. ಜುಲೈನಲ್ಲಿ 97,27,160 ಕಾರ್ಡುಗಳ 3.45 ಕೋಟಿ ಫಲಾನುಭವಿಗಳಿಗೆ 566 ಕೋಟಿ ರೂ. ಜಮಾ ಮಾಡಲಾಗಿತ್ತು.
ಪಡಿತರ ಚೀಟಿದಾರರಲ್ಲಿ ಕೆಲವರು ಕುಟುಂಬದ ಮುಖ್ಯಸ್ಥರ ಆಯ್ಕೆ ಮಾಡಿಲ್ಲ. ಕೆಲವರ ಬ್ಯಾಂಕ್ ಖಾತೆ ಇಲ್ಲ, ಇನ್ನು ಕೆಲವರು ಖಾತೆಗೆ ಆಧಾರ್ ಜೋಡಣೆ ಮಾಡಿಲ್ಲ. ಕೆಲವು ಕಾರ್ಡ್ ದಾರರು ಇ-ಕೆವೈಸಿ ಮಾಡಿಸಿಲ್ಲ. ಇವೆ ಮೊದಲಾದ ಕಾರಣಗಳಿಂದ 22 ಲಕ್ಷ ಬಿಪಿಎಲ್ ಕಾರ್ಡ್ ಗಳು ಹೊರಗುಳಿದಿವೆ. ಆಹಾರ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು 7 ಲಕ್ಷ ಕಾರ್ಡ್ ಗಳ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ ಕಾರ್ಡ್ ಗಳ ಸಮಸ್ಯೆಯನ್ನು ಬಗೆಹರಿಸಿ ಸೆಪ್ಟಂಬರ್ ನಲ್ಲಿ ಅವರ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.