ಬೆಂಗಳೂರು : ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಬಿಗ್ ಶಾಕ್, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯುಸೆಕ್ ನೀರು ಹರಿಸಲು ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಿ ನಡೆಸಿದ ಸಭೆಯಲ್ಲಿ ತಮಿಳುನಾಡು ಕರ್ನಾಟಕ ರಾಜ್ಯಗಳ ವಾದ-ಪ್ರತಿವಾದವನ್ನು ಆಲಿಸಿದ ಪ್ರಾಧಿಕಾರ ಆಗಸ್ಟ್ 29 ರಿಂದ ಸೆಪ್ಟೆಂಬರ್ 12 ರವರೆಗೆ ಮುಂದಿನ 15 ದಿನಗಳ ಕಾಲ ನಿತ್ಯವೂ 5 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಆದೇಶಿಸಿದೆ.
ತಮಿಳುನಾಡು ಕಾವೇರಿ ನದಿಯಿಂದ ಪ್ರತಿನಿತ್ಯ 24 ಕ್ಯುಸೆಕ್ ನೀರು ಹರಿಸುವಂತೆ ನಿರ್ದೇಶನ ನೀಡಲು ಪಟ್ಟು ಹಿಡಿಯಿತು. ತನ್ನ ಕೋರಿಕೆ ಸುಪ್ರೀಂಕೋರ್ಟ್ ಮುಂದಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿತು. ಈ ವಾದವನ್ನು ಕರ್ನಾಟಕದ ಪ್ರತಿನಿಧಿಗಳು ಪ್ರಾಧಿಕಾರದ ಸಭೆಯಲ್ಲಿ ಪ್ರಬಲವಾಗಿ ವಿರೋಧಿಸಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ತಮಿಳುನಾಡಿನ ಬೇಡಿಕೆ ಒಪ್ಪಲಾಗದು ಎಂದು ವಾದ ಮಂಡಿಸಿತು. ಅಂತಿಮವಾಗಿ ಪ್ರಾಧಿಕಾರವು ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಹೊರಡಿಸಿದೆ.