
ಚಿಕ್ಕಮಗಳೂರು: ಗಂಡನೊಂದಿಗೆ ಜಗಳವಾಡಿದ ಪತ್ನಿ ತವರು ಮನೆಗೆ ಹೋಗಿದ್ದರಿಂದ ಕೋಪಗೊಂಡ ಪತಿ ಮಾವನ ಮನೆಗೆ ವಾಮಾಚಾರ ಮಾಡಿಸಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಸತೀಶ್ ಎಂಬುವರು 13 ವರ್ಷಗಳ ಹಿಂದೆ ತಮ್ಮ ತಂಗಿ ಸುಮಿತ್ರಾ ಅವರನ್ನು ಮರಸಣಿಗೆಯ ಗುರುಮೂರ್ತಿಯೊಂದಿಗೆ ಮದುವೆ ಮಾಡಿಕೊಟ್ಟಿದ್ದರು.
ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಿರಿಯರು ರಾಜಿ ಸಂಧಾನ ಮಾಡಿದ್ದರು. ಕಳೆದ ತಿಂಗಳು ಇಬ್ಬರ ನಡುವೆ ಜಗಳವಾಗಿದ್ದರಿಂದ ಸುಮಿತ್ರಾ ಅಣ್ಣನ ಮನೆಗೆ ಸೇರಿದ್ದಾರೆ. ಇದರಿಂದ ಕೋಪಗೊಂಡ ಗುರುಮೂರ್ತಿ ಸೋಮವಾರ ಬೆಳಗಿನ ಜಾವ ಸತೀಶ್ ಮನೆಗೆ ಬಂದು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಮನೆ ಬಾಗಿಲಲ್ಲಿ ಯಾವುದೋ ಪ್ರಾಣಿಯ ರಕ್ತ ಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಚಾಕು ಕೂಡ ಅಲ್ಲೇ ಬಿಟ್ಟು ಹೋಗಿದ್ದಾನೆ.
ಮನೆಗೆ ನುಗ್ಗಿ ಬೆದರಿಕೆ ಹಾಕಿ ವಾಮಾಚಾರ ಮಾಡಿಸಿದ ಗುರುಮೂರ್ತಿ ವಿರುದ್ಧ ಬಣಕಲ್ ಠಾಣೆಗೆ ಸತೀಶ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.