ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಉದ್ದೇಶದೊಂದಿಗೆ ಕಾಂಗ್ರೆಸ್ ಹೊಸ ತಂಡ ರಚಿಸಲಾಗುತ್ತಿದೆ.
ಕೆಪಿಸಿಸಿ ಪುನರ್ ರಚನೆಯಾಗಲಿದ್ದು, ಉತ್ಸಾಹಿಗಳ ಹೊಸ ತಂಡ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಪದಾಧಿಕಾರಿಗಳ ಪಟ್ಟಿಯನ್ನು ರೆಡಿ ಮಾಡಲಾಗುತ್ತಿದೆ. ಪ್ರಸ್ತುತ ಇರುವ ನಾಲ್ವರು ಕಾರ್ಯಾಧ್ಯಕ್ಷರಿಗೆ ಕೊಕ್ ನೀಡಿ ಮೂವರು ಕಾರ್ಯಧ್ಯಕ್ಷರನ್ನು ನೇಮಕ ಮಾಡಲಾಗುವುದು.
ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಬದಲಾಗಲಿದ್ದು, 20 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಸಂಪುಟದಲ್ಲಿರುವ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಮಹಮ್ಮದ್ ಅವರನ್ನು ಕಾರ್ಯಾಧ್ಯಕ್ಷ ಹುದ್ದೆ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲಾಗುವುದು.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಚಂದ್ರಪ್ಪ ಮುಂದುವರೆಯಲಿದ್ದು, ಮೂವರನ್ನು ಹೊಸದಾಗಿ ಕಾರ್ಯಧ್ಯಕ್ಷರ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಮುಸ್ಲಿಂ, ಹಿಂದುಳಿದ ವರ್ಗ, ಲಿಂಗಾಯಿತ ಸಮುದಾಯಕ್ಕೆ ಸೇರಿದ ತಲಾ ಒಬ್ಬರು ಕಾರ್ಯಾಧ್ಯಕ್ಷರ ಹುದ್ದೆಗೆ ನೇಮಕವಾಗಲಿದ್ದಾರೆ. ಹಲವು ಸಚಿವರು, ಶಾಸಕರನ್ನು ಪಕ್ಷದ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಹೊಸ ಉತ್ಸಾಹಿ ತಂಡವನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಕೆಪಿಸಿಸಿ ಪನರ್ ರಚನೆಯಾಗಲಿದೆ.