ಕೊಚ್ಚಿ: ಶಿಶು ಸೇರಿದಂತೆ 139 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಸೋಮವಾರ ಬಾಂಬ್ ಬೆದರಿಕೆ ಕರೆ ಬಂದಿದೆ. ಪ್ರಯಾಣಿಕರನ್ನು ತಕ್ಷಣವೇ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದ್ದು, ವಿಮಾನವನ್ನು ತಪಾಸಣೆಗಾಗಿ ಪ್ರತ್ಯೇಕ ಪಾರ್ಕಿಂಗ್ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಕೊಚ್ಚಿನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್(ಸಿಐಎಎಲ್) ಪ್ರಕಾರ, ಇಂಡಿಗೋ ಫ್ಲೈಟ್ 6ಇ 6482 ಕೊಚ್ಚಿಯಿಂದ ಬೆಂಗಳೂರಿಗೆ ಬೆಳಗ್ಗೆ 10.30ಕ್ಕೆ ಹೊರಡಬೇಕಿತ್ತು, ಆಗ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಕಂಟ್ರೋಲ್ ರೂಮ್‌ಗೆ ನಿರ್ದಿಷ್ಟವಾಗಿ ಬೆಂಗಳೂರಿಗೆ ಹೋಗುವ ವಿಮಾನದ ಬಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಒಂದು ಶಿಶು ಸೇರಿದಂತೆ ಎಲ್ಲಾ 139 ಪ್ರಯಾಣಿಕರನ್ನು ಆಫ್‌ಲೋಡ್ ಮಾಡಿ ಭದ್ರತಾ ಹೋಲ್ಡ್ ಪ್ರದೇಶಕ್ಕೆ ವಿಮಾನ ಸ್ಥಳಾಂತರಿಸಲಾಯಿತು. ಪ್ರೋಟೋಕಾಲ್ ಪ್ರಕಾರ, ವಿಮಾನ ನಿಲ್ದಾಣದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯನ್ನು ಕರೆಯಲಾಯಿತು.
ಸಿಐಎಸ್‌ಎಫ್ ಕ್ವಿಕ್ ರೆಸ್ಪಾನ್ಸ್ ಟೀಮ್(ಕ್ಯೂಆರ್‌ಟಿ), ಬಾಂಬ್ ಸ್ಕ್ವಾಡ್, ರಾಜ್ಯ ಪೊಲೀಸ್, ಏರ್‌ಕ್ರಾಫ್ಟ್ ರೆಸ್ಕ್ಯೂ ಮತ್ತು ಫೈರ್ ಫೈಟಿಂಗ್(ಎಆರ್‌ಎಫ್‌ಎಫ್) ಮತ್ತು ವಿಮಾನ ನಿಲ್ದಾಣದ ಭದ್ರತೆಯನ್ನು ಒಳಗೊಂಡಂತೆ ತಪಾಸಣೆ ನಡೆಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಗೊತ್ತಾಗಿದೆ. ಪರಿಶೀಲನೆ ನಂತರ ವಿಮಾನ ಬೆಂಗಳೂರಿಗೆ ಹೊರಟಿತು ಎಂದು ಇಂಡಿಗೋ ತಿಳಿಸಿದೆ.