ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪರೀಕ್ಷೆಗಳಲ್ಲಿ ನಕಲು ತಡೆಯುವ ಉದ್ದೇಶದಿಂದ ಹಲವು ಕ್ರಮಗಳ ಜಾರಿಗೆ ಮುಂದಾಗಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳ ಕೊಠಡಿ ಮೇಲ್ವಿಚಾರಕರಾಗಿ ಪ್ರೌಢಶಾಲೆ ಶಿಕ್ಷಕರನ್ನು ಬಳಸಿಕೊಳ್ಳದೆ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಮಾತ್ರ ಕೊಠಡಿ ಮೇಲ್ವಿಚಾರಕರಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಗಳಲ್ಲಿ ಪ್ರೌಢಶಾಲೆ ಶಿಕ್ಷಕರು ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೇರೆ ಬೇರೆ ಶಾಲೆಗಳಿಗೆ ಪ್ರೌಢಶಾಲೆ ಶಿಕ್ಷಕರನ್ನು ನಿಯೋಜಿಸುತ್ತಿದ್ದು, ಶಿಕ್ಷಕರ ಕೊರತೆಯಾದಾಗ ಪ್ರಾಥಮಿಕ ಶಾಲೆ ಶಿಕ್ಷಕರ ಬಳಕೆ ಮಾಡಿಕೊಳ್ಳಲಾಗುತ್ತದೆ. ನಕಲು ಪ್ರಕರಣಗಳ ತನಿಖೆ ನಡೆಸಿದ ಸಂದರ್ಭದಲ್ಲಿ ಮೇಲ್ವಿಚಾರಕರಾಗಿದ್ದ ಪ್ರೌಢಶಾಲೆ ಶಿಕ್ಷಕರೇ ನಕಲಿಗೆ ವಿದ್ಯಾರ್ಥಿಗಳಿಗೆ ಸಹಕರಿಸಿದ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆ ಕೊಠಡಿ ಮೇಲ್ವಿಚಾರಕರಾಗಿ ನೇಮಕ ಮಾಡಿಕೊಳ್ಳಲಾಗುವುದು ಎನ್ನಲಾಗಿದೆ.
ಪ್ರೌಢಶಾಲೆ ಶಿಕ್ಷಕರು, ಡಿ ಗ್ರೂಪ್ ನೌಕರರು, ಎಸ್.ಡಿ.ಎ. ಸೇರಿದಂತೆ ಬೋಧಕೇತರ ಸಿಬ್ಬಂದಿಯನ್ನು ಕೂಡ ಅದೇ ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿಸದೇ ಬೇರೆ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ರೂಪುರೇಷೆ ಸಿದ್ದಪಡಿಸುತ್ತಿದೆ ಎಂದು ಹೇಳಲಾಗಿದೆ.