ಬೆಂಗಳೂರು: ಪಶ್ಚಿಮ ಘಟ್ಟ ಕುರಿತಾದ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿಲ್ಲದ ಕಾರಣ ತಿರಸ್ಕರಿಸಬೇಕೆಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಹೀಗಿದ್ದರೂ ಕೇಂದ್ರ ಸರ್ಕಾರ ನಿವೃತ್ತ ಐಎಫ್ಎಸ್ ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿದ್ದು, ಈ ಸಮಿತಿಗೆ ರಾಜ್ಯದ ಪಶ್ಚಿಮ ಘಟ್ಟದ ಎಲ್ಲಾ ಬಾಧ್ಯಸ್ಥರ ಭೇಟಿ ಮಾಡಿ ವರದಿ ಸಲ್ಲಿಸಲು ಕೋರಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಂಜೆ ಕುಮಾರ್ ಸಮಿತಿ ಸದಸ್ಯರು ತಮ್ಮನ್ನು ಭೇಟಿ ಮಾಡಿದಾಗ ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಜನವಸತಿಯಲ್ಲಿರುವ ನಿವಾಸಿಗಳ ಜೊತೆಗೆ ಸಮಾಲೋಚನೆ ನಡೆಸಿ ನಂತರ ವರದಿ ರಚಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿ 10 ವರ್ಷ ಹಳೆಯದಾಗಿದೆ, ಗಾಡ್ಗೀಳ್ ವರದಿ ಅದಕ್ಕಿಂತ ಹಳೆಯದಾಗಿದೆ. ಪ್ರಸ್ತುತ ಕಾಲಘಟ್ಟಕ್ಕೆ ಅಗತ್ಯಕ್ಕೆ ತಕ್ಕಂತೆ ವರದಿಯಲ್ಲಿ ಮಾರ್ಪಾಡು ಮಾಡಬೇಕಿದೆ. ಜನರಿಗೆ ಯಾವುದೇ ತೊಂದರೆ ಆಗಬಾರದೆಂಬುದು ಸರ್ಕಾರದ ನಿಲುವಾಗಿದ್ದು, ಎಲ್ಲರೂ ಒಪ್ಪುವಂತಹ ವರದಿ ಬಂದರೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.