ನವದೆಹಲಿ : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಆ.28 ರಂದು ಸೋಮವಾರ ನವದೆಹಲಿಯಲ್ಲಿ ‘ಕಾವೇರಿ ನಿರ್ವಹಣಾ ಪ್ರಾಧಿಕಾರ’ದ ಮಹತ್ವದ ಸಭೆ ನಿಗದಿಯಾಗಿದೆ.
ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಖ್ಯಾತೆ ತೆಗೆದಿದ್ದು, ಸೆ.1 ಕ್ಕೆ ಸುಪ್ರೀಂಕೋರ್ಟ್ ವಿಚಾರಣೆ ಮುಂದೂಡಿದೆ. ಇಂದು ವಾದ ವಿವಾದ ಆಲಿಸಿದ ಕೋರ್ಟ್ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ತಜ್ಞರಿದ್ದಾರೆ . ನಾವು ತಜ್ಞರಲ್ಲ ಹಾಗಾಗಿ ಯಾವುದನ್ನೂ ತನಿಖೆ ಮಾಡದೆ ತಕ್ಷಣ ಆದೇಶ ಹೊರಡಿಸುವುದುಕಷ್ಟ ಎಂದು ಅಭಿಪ್ರಾಯ ಪಟ್ಟ ಕೋರ್ಟ್ ಸೆ.1 ಕ್ಕೆ ವಿಚಾರಣೆ ಮುಂದೂಡಿದೆ. ಈ ಬೆನ್ನಲ್ಲೇ ಆ.28 ರಂದು ದೆಹಲಿಯಲ್ಲಿ ಸೋಮವಾರ ‘ಕಾವೇರಿ ನಿರ್ವಹಣಾ ಪ್ರಾಧಿಕಾರ’ದ ಮಹತ್ವದ ಸಭೆ ನಿಗದಿಯಾಗಿದೆ. ಸಭೆ ನಡೆಸಿ ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ವರದಿ ಸಲ್ಲಿಸುವಂತೆ ಕಾವೇರಿ ನಿರ್ವಹಣಾ ಪ್ರಾದಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಮಳೆ ಕೊರತೆಯಾದರೂ ಕಾವೇರಿ ನೀರಿಗಾಗಿ ತಗಾದೆ ತೆಗೆದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ರಾಜ್ಯಕ್ಕೆ ದಿನಕ್ಕೆ 24,000 ಕ್ಯೂಸೆಕ್ ನೀರು ಹರಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ತಮಿಳುನಾಡಿನ ಅರ್ಜಿ ಯಾವುದೇ ಕಾನೂನು ಆಧಾರ ಹೊಂದಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿತ್ತು.