ನವದೆಹಲಿ : ಕರ್ನಾಟಕದಲ್ಲಿ ಮಳೆ ಕೊರತೆಯಾದರೂ ಕಾವೇರಿ ನೀರಿಗಾಗಿ ತಗಾದೆ ತೆಗೆದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ರಾಜ್ಯಕ್ಕೆ ದಿನಕ್ಕೆ 24,000 ಕ್ಯೂಸೆಕ್ ನೀರು ಹರಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ತಮಿಳುನಾಡಿನ ಅರ್ಜಿ ಯಾವುದೇ ಕಾನೂನು ಆಧಾರ ಹೊಂದಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆ ಮಳೆ ಆಗಿಲ್ಲ, ಸರಾಸರಿ ಮಳೆಯಾಗದೇ ನೀರಿನ ಸಂಗ್ರಹ ಕೊರತೆ ಇದೆ. ಈ ಜಲ ವರ್ಷದಲ್ಲಿ ನಿಗದಿತ ನೀರು ಹರಿಸುವುದು ಕಷ್ಟ, ಅಷ್ಟು ಪ್ರಮಾಣದ ನೀರಿನ ಲಭ್ಯತೆಯು ಡ್ಯಾಂಗಳಲ್ಲಿ ಇಲ್ಲ. ಈವರೆಗೂ ಮಳೆ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದೇವೆ ಎಂದು ಕರ್ನಾಟಕ ಸರ್ಕಾರ ಅಫಿಡವಿಟ್ ಒಂದನ್ನು ಸಲ್ಲಿಸಿದೆ. ತಮಿಳುನಾಡಿನ ಅರ್ಜಿಗೆ ಯಾವುದೇ ಮಾನ್ಯತೆ ಇಲ್ಲ ಮತ್ತು ಅದು ಕೇಳಿದಷ್ಟು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಂದು ತಮಿಳುನಾಡು ಸರ್ಕಾರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಅರ್ಜಿ ವಿರುದ್ಧ ಕರ್ನಾಟಕ ಜಲ ಸಂಪನ್ಮೂಲ ಇಲಾಖೆ ಅಧಿಕಾರಿ ರಾಕೇಶ್ ಸಿಂಗ್ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ.