ಬೆಂಗಳೂರು: ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಹಿರಿಯ ನಟ, ನಿರ್ದೇಶಕ ಪ್ರಕಾಶ್ ರಾಜ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಟ್ವೀಟ್ ವಿವಾದಕ್ಕೀಡಾಗುತ್ತಿದ್ದಂತೆಯೇ ಈ ಬಗ್ಗೆ ಸ್ವತಃ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
ಚಂದ್ರಯಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತ ಪೋಸ್ಟ್ ಹಾಕಿದ್ದ ಪ್ರಕಾಶ್ ರಾಜ್, ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಅವರನ್ನು ಹೋಲುವಂತಹ ವ್ಯಂಗ್ಯಚಿತ್ರವುಳ್ಳ ಚಂದ್ರನ ಮೇಲಿಂದ ಚಹಾ ಸುರಿಯುತ್ತಿರುವ ಫೋಟೋ ಹಾಗೂ ಚಂದ್ರನಲ್ಲಿ ಚಹಾ ಅಂಗಡಿ ಕುರಿತ ಫೋಟೋ ಹಾಕಿದ್ದರು. ಚಂದ್ರಯಾನದಿಂದ ಬರುವ ಮೊದಲ ಫೋಟೋ ಎಂದು ಬರೆದುಕೊಂಡಿದ್ದರು. ಇಸ್ರೋ ವಿಜ್ಞಾನಿಗಳ ಪರಿಶ್ರಮ, ಚಂದ್ರಯಾನದ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಸಂದರ್ಭದಲ್ಲಿ ಹಿರಿಯ ನಟ ಮಾಡಿದ್ದ ಈ ವ್ಯಂಗ್ಯಭರಿತ ಟ್ವೀಟ್ ಭಾರಿ ಟೀಕೆಗೆ ಕಾರಣವಾಗಿತ್ತು. ಅಲ್ಲದೇ ಚಾಹಾ ಮಾರಾಟಗಾರರನ್ನು ತೋರಿಸುವ ಮೂಲಕ ಪ್ರದಾನಿ ಮೋದಿಯವರನ್ನು ಟೀಕಿಸಿದ್ದಾರೆ ಎಂದು ಕೆಲವರು ಕಿಡಿಕಾರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಮ್ಮ ಪೋಸ್ಟ್ ಬಗ್ಗೆ ಸಮರ್ಥನೆ ಮಾಡಿಕೊಂಡಿರುವ ಪ್ರಕಾಶ್ ರಾಜ್, ‘ದ್ವೇಷ, ದ್ವೇಷವನ್ನು ಮಾತ್ರ ನೋಡುತ್ತದೆ. ಕೇರಳದ ಚಾಯ್ ವಾಲಾಗಳನ್ನು ಸಂಭ್ರಮಿಸುವ ನಾನು ಆರ್ಮಸ್ಟ್ರಾಂಗ್ (ಚಂದ್ರನ ಮೇಲೆ ಮೊದಲು ಕಾಲಿಟ್ಟ ಮನುಷ್ಯ) ಕಾಲದ ಜೋಕ್ ನ್ನು ಉಲ್ಲೇಖಿಸಿದ್ದೆ. ಟ್ರೋಲರ್ ಗಳು ಯಾವ ಚಾಯ್ ವಾಲಾನನ್ನು ಅದರಲ್ಲಿ ಕಂಡಿದ್ದರು? ನಿಮಗೆ ಜೋಕ್ ನ್ನು ಕಾಣಲು ಸಾಧ್ಯವಾಗದಿದ್ದರೆ ನೀವೇ ಜೋಕ್ ಆಗುತ್ತೀರಿ….ಬೆಳವಣಿಗೆ ಹೊಂದಿರಿ…’ಎಂದು ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.