ಧಾರವಾಡ: ಹಣ ಪಡೆದರೂ ಗ್ರಾಹಕರೊಬ್ಬರಿಗೆ ಫ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್ ಒಬ್ಬರಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ಮತ್ತು ಪರಿಹಾರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.
ಪ್ರಕರಣದ ವಿವರ: ಬಾಗಲಕೋಟೆಯ ನಿವಾಸಿ ಗೀತಾ ಗೌಡರ ಎಂಬುವವರು ಧಾರವಾಡದ ಎಮ್.ಎಸ್. ಗ್ರೀನ್ ಕೌಂಟಿಯ ಮಾಲೀಕರಾದ ಶ್ರೀನಿವಾಸ ನಾಯ್ಡು ಎಂಬುವವರು ಈಟಿಗಟ್ಟಿಯ ಪ್ಲಾಟ್‍ನಂ.108 ನ್ನು 4,80,000 ರೂ. ಗಳಿಗೆ 2014ರಲ್ಲಿ ಖರೀದಿಸುವ ಕರಾರು ಒಪ್ಪಂದ ಮಾಡಿಕೊಂಡಿದ್ದರು.
ಆ ಪೈಕಿ ಬೇರೆ ಬೇರೆ ದಿನಾಂಕಗಳಂದು ದೂರುದಾರರು ಒಟ್ಟು 3,66,000 ರೂ. ಅಡ್ವಾನ್ಸ್ ಹಣ ಎದುರುದಾರ, ಬಿಲ್ಡರ್ ಗೆ ಕೊಟ್ಟಿದ್ದರು. ಬಾಕಿ ಮೊತ್ತವನ್ನು ತೆಗೆದುಕೊಂಡು ಖರೀದಿ ಪತ್ರ ನೋಂದಣಿ ಮಾಡಿಕೊಡುವಂತೆ ದೂರುದಾರ ಹಲವಾರು ಬಾರಿ ಎದುರುದಾರರಿಗೆ ಕೇಳಿಕೊಂಡರೂ ಸಹ ಎದುರುದಾರರು ಖರೀದಿ ಪತ್ರ ನೋಂದಣಿ ಮಾಡಿಕೊಟ್ಟಿರಲಿಲ್ಲ. ಎದುರುದಾರರ ಇಂತಹ ನಡಾವಳಿಯಿಂದ ತನಗೆ ಮೋಸವಾಗಿದೆ ಮತ್ತು ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತ ಹೇಳಿ ಬಿಲ್ಡರ್ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮತ್ತು ಪ್ರಭು ಸಿ. ಹಿರೇಮಠ ಅವರು ದೂರುದಾರನಿಂದ ಬಾಕಿ ಹಣವನ್ನು ಪಡೆದುಕೊಂಡು ಎದುರುದಾರ ಅವರಿಗೆ ಪ್ಲಾಟ್ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರು ಸಂದಾಯ ಮಾಡಿದ 3,66,000 ರೂ. ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50,000 ರೂ. ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ 10,000 ರೂ. ನೀಡುವಂತೆ ಆರ್.ಎಮ್. ಬಿಲ್ಡರ್ಸ್ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.