ಬಳ್ಳಾರಿ:
ಕಾರ್ಮಿಕ ಇಲಾಖೆಯಿಂದ ಕುರುಗೋಡು ಪಟ್ಟಣದಲ್ಲಿ ವಿವಿಧೆಡೆ ದಾಳಿ ನಡೆಸಿ ಸೋಮವಾರ 4 ಬಾಲಕಾರ್ಮಿಕರು ಹಾಗೂ 2 ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ತಿಳಿಸಿದ್ದಾರೆ.
ಪಟ್ಟಣದ ಬಾದನಹಟ್ಟಿ ರಸ್ತೆ, ತಾಲ್ಲೂಕು ಕಚೇರಿ ಮುಂಭಾಗ, ತೇರು ಬೀದಿ ಹಾಗೂ ಕಂಪ್ಲಿ ರಸ್ತೆ ಮಂತಾದ ಸ್ಥಳಗಳಲ್ಲಿ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಕಿರಾಣಿ ಅಂಗಡಿ ಇತ್ಯಾದಿ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ನಡೆಸಿ 04 ಬಾಲಕಾರ್ಮಿಕರು ಮತ್ತು 2 ಕಿಶೋರ ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ರಕ್ಷಿಸಲಾಗಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ ಮತ್ತು ಬಿಡಿಡಿಎಸ್ ಚೈಲ್ಡ್ ಲೈನ್ ಸಹಯೋಗದೊಂದಿಗೆ ನಗರದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಡಿಯಲ್ಲಿ ನೇಮಕವಾದ ನಿರೀಕ್ಷಕರ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ.
ದಾಳಿಯಲ್ಲಿ ರಕ್ಷಿಸಲಾದ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಕ್ರಮವಹಿಸಲಾಗಿದೆ ಹಾಗೂ ಮಕ್ಕಳ ವಯಸ್ಸಿನ ದಾಖಲೆಗಳನ್ನು ಪಡೆದ ನಂತರ ಮಾಲೀಕರ ವಿರುದ್ಧ ಬಾಲಕಾರ್ಮಿಕ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ತಹಶೀಲ್ದಾರ ರಾಘವೇಂದ್ರ ರಾವ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್, ಕಾರ್ಮಿಕ ನಿರೀಕ್ಷಕ ರವಿದಾಸ್, ಬೆಂಗಳೂರು ಬಚಪನ್ ಬಚಾವೋ ಅಂದೋಲನದ ರಾಜ್ಯ ಸಂಯೋಜಕ ವರ್ಗಿಸ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಯುವರಾಜ್, ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ಲೋಕರಾಜ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಭೋಜರಾಜ್ ಸೇರಿದಂತೆ ಚೈಲ್ಡ್ ಲೈನ್ ಸಿಬ್ಬಂದಿಗಳಾದ ಸುಲೋಚನ ಮತ್ತು ಚಂದ್ರಕಲಾ ಹಾಜರಿದ್ದರು.