
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ಕುರಿತಂತೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯೊಂದು ಹರಿದಾಡಿತ್ತು. ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮತ್ತು ಜಾಗೃತದಳದ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಹೆಸರಿನಲ್ಲಿ ಹೆಸರಿನಲ್ಲಿ ನಕಲಿ ಆದೇಶದ ಪ್ರತಿಯೊಂದನ್ನು ಹರಿ ಬಿಡಲಾಗಿದ್ದು, ಈ ಯೋಜನೆ ಸ್ಥಗಿತಗೊಳ್ಳಲಿದೆ ಎಂದು ಇದರಲ್ಲಿ ಹೇಳಲಾಗಿತ್ತು.
ಇದೀಗ ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಮಾಹಿತಿ ನೀಡಿದ್ದಾರೆ. ಸೋಮವಾರದಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಈ ಯೋಜನೆ ಸ್ಥಗಿತಗೊಳಿಸುವುದಾಗಿ ಹರಿಬಿಡಲಾಗಿರುವ ಆದೇಶದ ಪ್ರತಿ ನಕಲಿಯಾಗಿದ್ದು, ಸಾರ್ವಜನಿಕರು ಇದನ್ನು ನಂಬಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಶಕ್ತಿ ಯೋಜನೆ ಆರಂಭವಾಗಿ ಈಗಾಗಲೇ 72 ದಿನಗಳಾಗಿದ್ದು ಮಹಿಳೆಯರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಆಗಸ್ಟ್ 20ರವರೆಗೆ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿರುವ ಟಿಕೆಟ್ ಮೌಲ್ಯ ಒಂದು ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ತಿಳಿಸಿದ ಅವರು, ಈವರೆಗೆ 43.03 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಹೇಳಿದರಲ್ಲದೇ ಶಕ್ತಿ ಯೋಜನೆ ಸ್ಥಗಿತಗೊಳ್ಳುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಅಪಪ್ರಚಾರವನ್ನು ಸಾರ್ವಜನಿಕರು ನಂಬಬಾರದು ಎಂದು ಮನವಿ ಮಾಡಿದರು.