ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದಾಗಿ 14 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ಪಾವತಿಯಾಗಿಲ್ಲ ಎಂದು ಹೇಳಲಾಗಿದೆ.
ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ರಾಜ್ಯದಲ್ಲಿ 1.27 ಕೋಟಿ ಅಧಿಕ ಅರ್ಹ ಕಾರ್ಡ್ ಗಳಿವೆ. ಇವುಗಳಲ್ಲಿ 1,03,68,897 ಕಾರ್ಡ್ ಗಳಿಗೆ 605.90 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.
ಬ್ಯಾಂಕ್ ಖಾತೆ ಸಮಸ್ಯೆ ಸೇರಿದಂತೆ ಇತರೆ ಕೆಲವು ತಾಂತ್ರಿಕ ದೋಷಗಳ ಕಾರಣದಿಂದ ರಾಜ್ಯಾದ್ಯಂತ ಸುಮಾರು 14 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ದಾರರ ಖಾತೆಗೆ ಹಣ ಪಾವತಿಯಾಗಿಲ್ಲ. ಇದರಿಂದಾಗಿ ಅನ್ನಭಾಗ್ಯ ಯೋಜನೆಯ ಹಣದಿಂದ ಈ ಕಾರ್ಡ್ ದಾರರು ವಂಚಿತರಾಗಿದ್ದಾರೆ. ಕಳೆದ ತಿಂಗಳು 21 ಲಕ್ಷ ಕಾರ್ಡ್ ಗಳಿಗೆ ತಾಂತ್ರಿಕ ಸಮಸ್ಯೆಯ ಕಾರಣ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರಲಿಲ್ಲ.
ಇವುಗಳಲ್ಲಿ 7 ಲಕ್ಷ ಕಾರ್ಡುಗಳ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದ್ದು, ಉಳಿದ 14 ಲಕ್ಷ ಕಾಡ್ಡ್ ಗ ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿ ಹಂತ ಹಂತವಾಗಿ ಬಗೆಹರಿಸಿ ಖಾತೆಗೆ ಹಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಕಳೆದ ತಿಂಗಳು ಜಿಲ್ಲಾವಾರು ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಈ ಬಾರಿ ಏಕಕಾಲಕ್ಕೆ ಹಣ ವರ್ಗಾವಣೆ ಮಾಡಲಾಗುವುದು.
1.27 ಕೋಟಿ ಗೂ ಅಧಿಕ ಬಿಪಿಎಲ್ ಕಾರ್ಡ್ ಗಳಲ್ಲಿ ಸುಮಾರು 8 ಲಕ್ಷ ಪಡಿತರ ಚೀಟಿದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯದ ಕಾರಣ ಅವರನ್ನು ಸೌಲಭ್ಯದಿಂದ ಕೈಬಿಡಲಾಗಿದೆ. ಮೂರು ತಿಂಗಳಿಂದ ರೇಷನ್ ಪಡೆಯದ ಕಾರ್ಡ್ ದಾರರು ಅನ್ನಭಾಗ್ಯ ಯೋಜನೆ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹರಾಗುತ್ತಾರೆ.
ಅಂತ್ಯೋದಯ ಕಾರ್ಡ್ ಗಳಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿದ್ದರೆ ಅಂತವರನ್ನು ಹೊರಗಿಡಲಾಗಿದೆ. ಮೂರಕ್ಕಿಂತ ಹೆಚ್ಚು ಸದಸ್ಯರಿದ್ದರೆ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ಕೆಲವರಿಗೆ ಖಾತೆ ಇಲ್ಲ, ಮತ್ತೆ ಕೆಲವರ ಖಾತೆ ನಿಷ್ಕ್ರಿಯವಾಗಿವೆ, ಕೆಲವರು ತಪ್ಪಾದ ಆಧಾರ್ ಸಂಖ್ಯೆ ನೀಡಿದ್ದಾರೆ. ಪಡಿತರೆ ಚೀಟಿಗೆ ಕೆಲವರ ಆಧಾರ್ ಲಿಂಕ್ ಮಾಡಿಲ್ಲ, ರಾಷ್ಟ್ರೀಯ ಮಾಹಿತಿ ಕೇಂದ್ರದ ದತ್ತಾಂಶ ಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ಅನ್ನ ಭಾಗ್ಯದ ಹಣ ಖಾತೆಗೆ ಪಾವತಿಯಾಗಿಲ್ಲ. ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.