ಬೆಂಗಳೂರು: ರಾಜ್ಯದ ಆಯ್ದ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ಶಿಕ್ಷಣ ಮಂತ್ರಾಲಯ ಅನುಮತಿ ನೀಡಿದ್ದು, ಸಮಗ್ರ ಶಿಕ್ಷಣ ಕರ್ನಾಟಕ ಸುತ್ತೋಲೆ ಹೊರಡಿಸಿದೆ.
2023 -24ನೇ ಸಾಲಿನಿಂದ ಪ್ರಾಯೋಗಿಕವಾಗಿ ಷರತ್ತಿಗೆ ಒಳಪಟ್ಟು ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ತಿಳಿಸಲಾಗಿದೆ. ಇದಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ಆಗಸ್ಟ್ ನಲ್ಲಿ ತರಗತಿ ಆರಂಭಿಸಲು ಹೇಳಲಾಗಿದೆ.
ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಈ ಬಗ್ಗೆ ಪ್ರಚಾರ ಮಾಡಬೇಕು. 4-5 ರಿಂದ 5 ವರ್ಷ ವಯೋಮಿತಿ ಒಳಗಿನ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಮೂಲಕ ಎಲ್ಕೆಜಿಯ ಒಂದು ವಿಭಾಗ ಮಾತ್ರ ಆರಂಭಿಸಬೇಕು.
ಕನಿಷ್ಠ 20, ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳಬೇಕು. ಎಸ್.ಡಿ.ಎಂ.ಸಿ. ವತಿಯಿಂದ ತಾತ್ಕಾಲಿಕವಾಗಿ 10 ತಿಂಗಳ ಅವಧಿಗೆ ಪ್ರಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ 7500 ರೂ. ಮತ್ತು ಆಯಾಗಳಿಗೆ 5000 ರೂ.ಮಾಸಿಕ ಸಂಭಾವನೆ ನಿಗದಿಪಡಿಸುವಂತೆ ಉಪನಿರ್ದೇಶಕರಿಗೆ ತಿಳಿಸಲಾಗಿದೆ.