ಸಾಮಾನ್ಯವಾಗಿ ಎಲ್ಲರಿಗೂ ತರಹೇವಾರಿ ಊಟ, ಉಪಹಾರಗಳೆಂದರೆ ಬಹಳ ಇಷ್ಟ. ವಿಶೇಷವಾಗಿ ಮದುವೆಗಳು ಮತ್ತು ಪಾರ್ಟಿಗಳಲ್ಲಿ ಎಲ್ಲರೂ ಚೆನ್ನಾಗಿ ತಿನ್ನುತ್ತಾರೆ. ತಿಂದಿದ್ದೆಲ್ಲ ಜೀರ್ಣವಾಗಲೆಂದು ಜೀರ್ಣಕಾರಿ ಮಾತ್ರೆಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ತಾರೆ.
ಈ ಜೀರ್ಣಕಾರಿ ಮಾತ್ರೆಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇವುಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಅವುಗಳನ್ನು ತೀರಾ ಅಗತ್ಯವಿದ್ದಾಗ ಮಾತ್ರ ಬಳಸಬೇಕು.
ಅತಿಯಾದ ಜೀರ್ಣಕಾರಿ ಮಾತ್ರೆ ಸೇವನೆಯ ಅನಾನುಕೂಲಗಳು
ಜೀರ್ಣಕಾರಿ ಮಾತ್ರೆಗಳು ಸಾಮಾನ್ಯವಾಗಿ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತವೆ. ಆದರೆ ಅವುಗಳನ್ನು ಅತಿಯಾಗಿ ತಿಂದರೆ ಹಾನಿಯಾಗುವುದು ಖಚಿತ.
ಅಜೀರ್ಣ – ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ನೀವು ಜೀರ್ಣಕಾರಿ ಮಾತ್ರೆಗಳನ್ನು ಸೇವಿಸುತ್ತಿದ್ದರೂ, ಅವುಗಳ ಪ್ರಮಾಣ ಹೆಚ್ಚಾದರೆ ಅಜೀರ್ಣ, ಗ್ಯಾಸ್, ಅಲ್ಸರ್ ಮತ್ತು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಪೌಷ್ಟಿಕಾಂಶದ ಕೊರತೆ – ಹೆಚ್ಚು ಜೀರ್ಣಕಾರಿ ಮಾತ್ರೆಗಳ ಸೇವನೆಯು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಬದಲಾಯಿಸಬಹುದು. ಇದರಿಂದಾಗಿ ಆಹಾರದ ಪೋಷಣೆ ಸರಿಯಾಗಿ ಆಗುವುದಿಲ್ಲ. ಇದು ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಬಹುದು. ಇದರಿಂದ ದೇಹದಲ್ಲಿ ದೌರ್ಬಲ್ಯ ಮತ್ತು ಇತರ ಆರೋಗ್ಯ ಸಮಸ್ಯೆಗಳಾಗಬಹುದು.
ದೇಹದಲ್ಲಿ ಟಾಕ್ಸಿನ್ ಸಂಗ್ರಹ – ವೈದ್ಯರ ಶಿಫಾರಸಿಲ್ಲದೆ ಅತಿಯಾದ ಜೀರ್ಣಕಾರಿ ಮಾತ್ರೆಗಳನ್ನು ಸೇವಿಸಿದರೆ ಅದು ಅನಗತ್ಯವಾಗಿ ದೇಹದಲ್ಲಿ ವಿಷಕಾರಿ ವಸ್ತುಗಳನ್ನು ಸಂಗ್ರಹಿಸಬಹುದು. ಅನೇಕ ಇತರ ಸಮಸ್ಯೆಗಳಿಗೆ ಇದು ಕಾರಣವಾಗಬಹುದು.
ವಾಂತಿ – ಅತಿಯಾದ ಜೀರ್ಣಕಾರಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದಾಗಿ ಮಾನವ ದೇಹವು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.
ಅವಲಂಬನೆಯ ಅಪಾಯ – ನಿಯಮಿತವಾಗಿ ಜೀರ್ಣಕಾರಿ ಮಾತ್ರೆಗಳನ್ನು ಸೇವಿಸಿದರೆ ಅವುಗಳಿಲ್ಲದೆ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಜೀರ್ಣಕ್ರಿಯೆಗಾಗಿ ಅಂತಹ ಔಷಧಿಗಳ ಮೇಲೆ ಅವಲಂಬನೆಯನ್ನು ಹೆಚ್ಚಿಸದಿರುವುದು ಉತ್ತಮ. ಇಲ್ಲದಿದ್ದರೆ ಆರೋಗ್ಯವು ಅನಗತ್ಯವಾಗಿ ಹದಗೆಡುತ್ತದೆ.