
ರಾಜ್ಯದ ಬಹುತೇಕ ಭಾಗದಲ್ಲಿ ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಇದೇ ಹೊತ್ತಲ್ಲೇ ರೈತರಿಗೆ ವಿದ್ಯುತ್ ಶಾಕ್ ಎದುರಾಗಿದೆ.
ಕೃಷಿ ಪಂಪ್ ಸೆಟ್ ಗಳಿಗೆ ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲಿ 7 ಗಂಟೆ 3 ಫೇಸ್ ವಿದ್ಯುತ್ ಪೂರೈಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಈ ಅವಧಿ ಕೆಲವು ಕಡೆ ಕೇವಲ 4 ತಾಸಿಗೆ ಕಡಿತವಾಗಿದೆ.
ಬಹುತೇಕ ಕಡೆ ನಿರಂತರವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಮತ್ತೆ ಕೆಲವು ಕಡೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿರುವುದರಿಂದ ರೈತರು ನೀರು ಹಾಯಿಸಲು ತೊಂದರೆಯಾಗುತ್ತಿದೆ. ಕಾಡು ಪ್ರಾಣಿಗಳ ದಾಳಿ ಆತಂಕ ಕೂಡ ಹೆಚ್ಚಿದೆ.
ದಿನದಲ್ಲಿ 10 ರಿಂದ 12 ಗಂಟೆ ಕೃಷಿ ಪಂಪ್ ಸೆಟ್ ಗಳಿಗೆ 3ಫೇಸ್ ವಿದ್ಯುತ್ ನೀಡಬೇಕು. ತೋಟದ ಮನೆಗಳಿಗೆ 24 ಗಂಟೆ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.