ಬೆಂಗಳೂರು: ಕೋಟ್ಯಂತರ ರೂಪಾಯಿ ವೆಚ್ಚಮಾಡಿ ನಿರ್ಮಾಣಗೊಂಡಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಕೊರತೆಯಿಂದ ಬಾಗಿಲು ಮುಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ನಿರ್ಮಿಸಿದ್ದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಪೂರ್ಣ ಬಂದ್ ಆಗಿದ್ದು, ಅಲ್ಲಿರುವ ಉಪಕರಣಗಳಿಗೆ ತುಕ್ಕು ಹಿಡಿಯುತ್ತಿವೆ. ವೈದ್ಯರ ಕೊರತೆ ಎಂಬ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಬಾಗಿಲು ಮುಚ್ಚಿದ್ದ ಈ ಆಸ್ಪತ್ರೆ ಈಗ ಶಾಶ್ವತವಾಗಿ ಕ್ಲೋಸ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಠಾತ್ ಹೃದಯಾಘಾತ, ಸಾವು ತಡೆಯುವ ನಿಟ್ಟಿನಲ್ಲಿ ನಿರ್ಮಾಣವಾಗಿದ್ದ ಶಿವಾಜಿನಗರ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ವಿಭಾಗಳನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ ನಿರೀಕ್ಷೆಗೆ ತಕ್ಕಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿತ್ತು. ಬಳಿಕ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ನ್ನಾಗಿ ಮಾಡಲಾದ ಆಸ್ಪತ್ರೆಯನ್ನು ಆನಂತರದಲ್ಲಿ ಬೀಗ ಹಾಕಲಾಯಿತು.
ಈ ಆಸ್ಪತ್ರೆಯನ್ನು ಮತ್ತೆ ತೆಗೆದು ಸಾರ್ವಜನಿಕರಿಗೆ ಸೇವೆ ಸಿಗುವಂತೆ ಆಗಬೇಕು ಎಂಬುದು ಶಿವಾಜಿನಗರ ಹಾಗೂ ಸುತ್ತಮುತ್ತಲಿನ ಜನರ ಒತ್ತಾಯವಾಗಿದೆ.