ಕಾರವಾರ: ರಾಜ್ಯ ರಾಜಕಾರಣದಲ್ಲಿ ಮತ್ತೆ ‘ಆಪರೇಷನ್’ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಕೆಲ ಬಿಜೆಪಿ ಶಾಸಕರನ್ನು ಕಾಂಗ್ರೆಸ್ ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಮುಂದಾಗಿದೆ. ಪ್ರಮುಖವಾಗಿ ಬಿಜೆಪಿಗೆ ಸೇರಿದ್ದ ಕಾಂಗ್ರೆಸ್ ನ ಹಲವು ಶಾಸಕರು ವಾಪಸ್ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ನಿರ್ಧರಿಸಿರುವ ಬಿಜೆಪಿ ನಾಯಕರು, ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್, ಎಂಟಿಬಿ ನಾಗರಾಜ್ ಸೇರಿದಂತೆ ಕೆಲ ನಾಯಕರು ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಕಾಂಗ್ರೆಸ್ ಸೇರುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಕಾಂಗ್ರೆಸ್ ಗೆ ಮರಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ, ಶಾಸಕ ಶಿವರಾಮ್ ಹೆಬ್ಬಾರ್, ಇನ್ನೂ ಕಾಲ ನಿರ್ಣಯವಾಗಿಲ್ಲ ಎಂದಿದ್ದಾರೆ. ಆದರೆ ತನಗೆ ಬಿಜೆಪಿಯ ಕೆಲ ಮುಖಂಡರ ಮೇಲೆ ಅಸಮಾಧಾನವಿದೆ ಎಂದಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ ಸರಿ ಎನಿಸಿಲ್ಲ. ಯಾರೂ ರಾಜಕೀಯ ಹಿನ್ನೆಲೆ, ಅನುಭವವಿಲ್ಲದೇ ಈ ಕ್ಷೇತ್ರಕ್ಕೆ ಬರುವುದಿಲ್ಲ. ಕೆಲ ಬಿಜೆಪಿ ಮುಖಂಡರ ಬಗ್ಗೆ ಅಸಮಾಧಾನವಿದ್ದು, ಪಟ್ಟಿಯನ್ನು ಕೊಟ್ಟಿದ್ದೇನೆ. ಅವರ ಮೇಲೆ ಕ್ರಮ ಆಗಬೇಕು. ಕ್ರಮವಾಗದಿದ್ದರೆ ಪಕ್ಷ ಅರಗಿಸಿಕೊಳ್ಳಲಾಗದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.