ಬೆಂಗಳೂರು: ಬಿಬಿಎಂಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ಬಿಚ್ಚಿಡುತ್ತೇನೆ ಎಂದು ಹೇಳಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಚ್ಚಿಡುವವರನ್ನು ತಡೆಯಲು ಆಗಲ್ಲ, ಕುಮಾರಸ್ವಾಮಿ ಏನು ಬೇಕಾದರೂ ಮಾಡಲಿ, ಅವರ ಬಳಿ ಇರುವ ಮಾಹಿತಿ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಪೆನ್ ಡ್ರೈವ್ ಮಾಹಿತಿ ಬಹಿರಂಗಪಡಿಸಿದರೆ ಸಿಒಡಿ ತನಿಖೆ ಮಾಡಿಸಿ ತಮ್ಮ ಪರ ವರದಿ ಮಾಡಿಸುತ್ತಾರೆ ಎಂದು ಹೇಳಿದ್ದಾರೆ. ನಮಗೆ ಅವರಷ್ಟು ಅನುಭವವಿಲ್ಲ. ಈಗ ಅವರನ್ನು ‘ಅಣ್ಣ’ ಎಂದು ಕರೆಯುವಂತಿಲ್ಲ. ಮುಂದಿನ ಜನ್ಮದ ಬಗ್ಗೆ ಬೇರೆ ಮಾತಾಡಿದ್ದಾರೆ. ಇರಲಿ ಎಂದರು.
ಬಿಬಿಎಂಪಿ ಕಾಮಗಾರಿ ವಿಚಾರವಾಗಿ ನನ್ನ ಘನತೆಗೆ ಧಕ್ಕೆಯಾಗುವಂತೆ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ನೀಡುತ್ತೇನೆ. ಈ ಬಗ್ಗೆ ನಾನು ದಾಖಲೆ ಸಮೇತ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನಾನು ಹೆಚ್ ಡಿಕೆ ಜೊತೆ ವೈಯಕ್ತಿಕ ಜಟಾಪಟಿಗೆ ಇಳಿದಿಲ್ಲ, ರಾಜಕೀಯ ಯುದ್ಧ ಮಾಡಿ ಮುಗಿದಿದೆ. ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅದನ್ನು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ತಮಗೆ ಅಧಿಕಾರ, ಅವಕಾಶ ಸಿಗಲಿಲ್ಲ ಎಂದು ಅಸೂಯೆಯಿಂದ ಮಾತನಾಡುತ್ತಿದ್ದಾರೆ ಎಂದರು.