ಪ್ರಪಂಚದಾದ್ಯಂತ ಕೊರೊನಾ ಇನ್ನೂ ಸಂಪೂರ್ಣ ನಿವಾರಣೆಯಾಗಿಲ್ಲ. ಭಾರತ ಹಾಗೂ ಬ್ರಿಟನ್‌ನಲ್ಲಿ ಕೊರೊನಾದ ಹೊಸ ರೂಪಾಂತರ ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. ಕೋವಿಡ್ ಸೋಂಕು ತಗುಲಿದ್ದ ಅನೇಕರು ಈಗಾಗಲೇ ಚೇತರಿಸಿಕೊಂಡಿದ್ದಾರೆ. ಆದರೆ ಗುಣಮುಖವಾಗಿ ಒಂದು ವರ್ಷದ ನಂತರವೂ ಕೋವಿಡ್ ಲಕ್ಷಣಗಳು ಗೋಚರಿಸುತ್ತವೆ. ಇತ್ತೀಚಿನ ವರದಿಯ ಪ್ರಕಾರ ಅನೇಕರಲ್ಲಿ ದೀರ್ಘ ಕೋವಿಡ್‌ನ ಅಪಾಯಕಾರಿ ಲಕ್ಷಣಗಳು ಗೋಚರಿಸಿವೆ.
ದೀರ್ಘ ಕೋವಿಡ್ ಸಮಸ್ಯೆ ಹೊಂದಿರುವ ರೋಗಿಗಳ ಪಾದಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ. ಈ ವರದಿಯ ಪ್ರಕಾರ 10 ನಿಮಿಷಗಳ ಕಾಲ ನಿಂತುಕೊಂಡೇ ಇದ್ದರೆ ರೋಗಿಯ ಪಾದಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ. ದೀರ್ಘ ಕೋವಿಡ್‌ನ ಅಡ್ಡಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು, 33 ವರ್ಷದ ವ್ಯಕ್ತಿಯ ಪ್ರಕರಣವನ್ನು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಆತನಿಗೆ ಅಕ್ರೊಸೈನೋಸಿಸ್ ಎಂಬ ರೋಗ ಕಾಣಿಸಿಕೊಂಡಿದೆ.
ಅಕ್ರೊಸೈನೋಸಿಸ್ ಎನ್ನುವುದು ಕಾಲುಗಳ ರಕ್ತನಾಳಗಳಲ್ಲಿ ರಕ್ತದ ಶೇಖರಣೆಯಿಂದ ನಿರೂಪಿಸಲ್ಪಟ್ಟ ಒಂದು ಸ್ಥಿತಿಯಾಗಿದೆ. ಇದರಿಂದಾಗಿ ಪಾದಗಳ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತದೆ. ಒಂದು ನಿಮಿಷ ನಿಂತೇ ಇದ್ದರೆ ಪಾದಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ, 10 ನಿಮಿಷಗಳಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತವೆ. ಇದಲ್ಲದೆ ಪಾದಗಳು ಒಂದು ರೀತಿ ಭಾರವಾದಂತೆ ಎನಿಸುವುದು, ತುರಿಕೆ ಸಮಸ್ಯೆಗಳು ಸಹ ಕಂಡುಬರುತ್ತವೆ. ನೀಲಿ ಬಣ್ಣಕ್ಕೆ ತಿರುಗಿದ್ದ ಪಾದಗಳು, ವ್ಯಕ್ತಿ ಕುಳಿತುಕೊಂಡಾಗ ಸಹಜ ಸ್ಥಿತಿಗೆ ಮರಳುತ್ತವೆ. ಎರಡು ನಿಮಿಷಗಳ ನಂತರ ಪಾದಗಳು ಮೊದಲಿನಂತೆಯೇ ಆಗುತ್ತವೆ. ಕೋವಿಡ್ -19 ಸೋಂಕಿನ ನಂತರ ಈ ಸಮಸ್ಯೆ ಅನೇಕರಲ್ಲಿ ಕಾಣಿಸಿಕೊಂಡಿದೆ.
ಅಕ್ರೊಸೈನೋಸಿಸ್ ಎಂದರೇನು ?
ಇದು ಕ್ರಿಯಾತ್ಮಕ ಬಾಹ್ಯ ಅಪಧಮನಿ ಕಾಯಿಲೆ. ಇದರಿಂದಾಗಿ ಎರಡೂ ಕೈಗಳು ಮತ್ತು ಕಾಲುಗಳ ಬಣ್ಣವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆಕ್ರೊಸೈನೋಸಿಸ್ ಹೆಚ್ಚಿನ ಜನರಿಗೆ ಹಾನಿಕಾರಕವಲ್ಲ ಎಂದೇ ಹೇಳಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಕೊರೊನಾ ಸೋಂಕಿನ ಬಳಿಕ ಈ ಸಮಸ್ಯೆ ಏಕೆ ಉಂಟಾಗುತ್ತಿದೆ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ.
Long Covidನ ಅಡ್ಡಪರಿಣಾಮಗಳು
ನಿಂತಿರುವಾಗ ತ್ವರಿತ ಹೃದಯ ಬಡಿತ
ಪೋಸ್ಚುರಲ್ ಆರ್ಥೋಸ್ಟಾಟಿಕ್ ಟಾಕಿಕಾರ್ಡಿಯಾ ಸಿಂಡ್ರೋಮ್ (POTS)
ರಕ್ತದೊತ್ತಡ ಸಮಸ್ಯೆ
ಉಸಿರಾಟದ ತೊಂದರೆಗಳು
ಜೀರ್ಣಕಾರಿ ಸಮಸ್ಯೆಗಳು