ಅತ್ತೆ-ಸೊಸೆ ಅಂದ್ರೆ ಸಾಮಾನ್ಯವಾಗಿ ನಾನೊಂದು ತೀರ, ನೀನೊಂದು ತೀರಾ ಅಂತಿರುತ್ತಾರೆ. ಒಳಗೊಳಗೆ ಸಿಡಿಮಿಡಿ ಅಂತಿರುತ್ತಾರೆ. ಆದರೆ, ಇಲ್ಲೊಬ್ಬಾಕೆ ಅತ್ತೆ, ತನ್ನ ಸೊಸೆಗೆ ಕಿಡ್ನಿ ದಾನ ಮಾಡುವ ಮೂಲಕ ಆಕೆಗೆ ಮರುಜೀವ ನೀಡಿದ್ದಾರೆ.
ಹೌದು, ಮುಂಬೈನಲ್ಲಿ 70 ವರ್ಷದ ಮಹಿಳೆಯೊಬ್ಬರು ಈ ತಿಂಗಳ ಆರಂಭದಲ್ಲಿ ತನ್ನ 43 ವರ್ಷದ ಸೊಸೆಗೆ ಮೂತ್ರಪಿಂಡವನ್ನು ದಾನ ಮಾಡಿದ್ದಾರೆ. ಆಗಸ್ಟ್ 1 ರಂದು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕಳೆದ ವರ್ಷ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವುದು ಪತ್ತೆಯಾದ ನಂತರ ಅಮೀಷಾ ಅವರ ಮೂತ್ರಪಿಂಡಗಳು ಹಾನಿಗೊಳಗಾಗಿದ್ದವು.
ಹೀಗಾಗಿ ಪ್ರಭಾ ಕಾಂತಿಲಾಲ್ ಮೋಟಾ ಅವರು ತಮ್ಮ ಸೊಸೆಗೆ ಕಿಡ್ನಿಯನ್ನು ದಾನ ಮಾಡಲು ನಿರ್ಧರಿಸಿದ್ರು. ಅವರಿಗೆ ವಯಸ್ಸಾಗಿದ್ರಿಂದ ಮೂವರು ಪುತ್ರರು ತಾಯಿ ಬಗ್ಗೆ ಭಯಭೀತರಾಗಿದ್ದರಂತೆ. ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಎಂದು ಮಕ್ಕಳಿಗೆ ಧೈರ್ಯ ತುಂಬಿದ 70 ವರ್ಷದ ಪ್ರಭಾ, ನಾನು ಅವಳನ್ನು ನನ್ನ ಮಗಳಂತೆ ನೋಡುತ್ತೇನೆ ಸೊಸೆಯಂತೆ ಅಲ್ಲ ಎಂದಿದ್ದಾರೆ.
ದಾನ ಮಾಡಲು ಅರ್ಹರಲ್ಲದ ಮಧುಮೇಹಿಯಾಗಿರುವ ಅಮೀಷಾ ಅವರ ಪತಿ ಜಿತೇಶ್ ಮೋಟಾ ಅವರು ತಮ್ಮ ಪತ್ನಿಯ ಜೀವವನ್ನು ಉಳಿಸಲು ಬಯಸಿದ್ದರು. ಆದರೆ ಅವರ ತಾಯಿಯ ಆರೋಗ್ಯದ ಬಗ್ಗೆಯೂ ಚಿಂತಿತರಾಗಿದ್ದಾರೆ. ದಾನಿಗಾಗಿ ಎಂಟು ವರ್ಷಗಳಿಗಿಂತ ಹೆಚ್ಚು ಕಾಯಬಹುದು ಎಂದು ವೈದ್ಯರು ಹೇಳಿದ್ದರು. ತನ್ನ ತಾಯಿ ಮೂತ್ರಪಿಂಡವನ್ನು ನೀಡುವುದಾಗಿ ಹೇಳಿದ್ರು ಅಂತಾ ಜಿತೇಶ್ ತಿಳಿಸಿದ್ರು.
ಇನ್ನು ಈ ಬಗ್ಗೆ ಮಾತನಾಡಿದ ಡಾ.ಚಂದ್ರಕಾಂತ್ ಲಲ್ಲನ್, 44 ವರ್ಷಗಳ ವೈದ್ಯ ವೃತ್ತಿಯಲ್ಲಿ ಇಂತಹ ದೇಣಿಗೆಯನ್ನು ನಾನು ನೋಡಿಲ್ಲ. ಭಾರತದಲ್ಲಿ ಹೆಚ್ಚಿನ ಅಂಗ ದಾನಿಗಳು ತಮ್ಮ ಸಂಗಾತಿಗಳು, ಪೋಷಕರು ಅಥವಾ ಮಕ್ಕಳಿಗೆ ಈ ಅಂಗಗಳನ್ನು ದಾನ ಮಾಡುವ ಮಹಿಳೆಯರು ಇರುತ್ತಾರೆ. ಆದರೆ, ಅತ್ತೆ ತನ್ನ ಕಿಡ್ನಿಯನ್ನು ತನ್ನ ಸೊಸೆಗೆ ದಾನ ಮಾಡುವುದು ಅಪರೂಪ ಅಂತಾ ಡಾ. ಲಲನ್ ಹೇಳಿದ್ರು.