ಬೆಂಗಳೂರು: ಬಡವರು, ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಎಂಎಸ್ಐಎಲ್ ಮದ್ಯ ಮಾರಾಟ ಮಾಡುತ್ತಿದ್ದು, ಈಗ ಶ್ರೀಮಂತರನ್ನು ಕೂಡ ಆಕರ್ಷಿಸಲು ಮುಂದಾಗಿದೆ.
ರಾಜ್ಯದಾದ್ಯಂತ ಪ್ರೀಮಿಯಂ ವಿದೇಶಿ ಬ್ರ್ಯಾಂಡ್ ಗಳ ಚಿಲ್ಲರೆ ಮದ್ಯ ಮಾರಾಟಕ್ಕೆ ಎಂಎಸ್ಐೆಲ್ ವತಿಯಿಂದ ಹೈಟೆಕ್ ಮಳಿಗೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ವಾರ್ಷಿಕ 150 ರಿಂದ 25 ಕೋಟಿ ರೂ. ಹೆಚ್ಚುವರಿ ವಹಿವಾಟು ನಡೆಸುವ ಗುರಿ ಹೊಂದಿದೆ.
ರಾಜ್ಯದ ಬಹುತೇಕ ಭಾಗದಲ್ಲಿ ಖಾಸಗಿಯ ಮದ್ಯ ಮಾರಾಟದ ಬೃಹತ್ ಶೋರೂಂಗಳಿದ್ದು, ಅದೇ ರೀತಿ ಬಾಡಿಗೆ ಕಟ್ಟಡಗಳಲ್ಲಿ ಎಂಎಸ್ಐಎಲ್ ಹೈಟೆಕ್ ಮಳಿಗೆಗಳನ್ನು ತೆರೆಯಲಾಗುತ್ತದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜನಾಕರ್ಷಕವಾಗಿ ಹೈಟೆಕ್ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು, ದಾವಣಗೆರೆ, ಮಂಗಳೂರು, ಮೈಸೂರು, ಬೆಳಗಾವಿ ಮೊದಲಾದ ದೊಡ್ಡ ನಗರಗಳಲ್ಲಿ ಅತ್ಯಾಧುನಿಕ ವಿನ್ಯಾಸದ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಎಂಎಸ್ಐಎಲ್ ಮುಂದಾಗಿದೆ.
ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ 10 ಮಳಿಗೆಗಳು, ನಂತರದ ಹಂತದಲ್ಲಿ 40 ಹೈಟೆಕ್ ಮದ್ಯದ ಅಂಗಡಿಗಳನ್ನು ತೆರೆಯಲಾಗುವುದು. ದೊಡ್ಡ ನಗರಗಳಲ್ಲಿ ಎರಡು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಮಳಿಗೆಗಳನ್ನು ತೆರೆಯಲಿದ್ದು, ನಂತರ ಅವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆ ಇರುವ ವಿಸ್ಕಿ, ಓಡ್ಕಾ, ಸ್ಕಾಚ್ ವೈನ್ ಗಳನ್ನು ಮಾರಾಟ ಮಾಡಲಾಗುತ್ತದೆ. ಶ್ರೀಮಂತರನ್ನು ಸೆಳೆಯುವ ಉದ್ದೇಶದಿಂದ ಹೈಟೆಕ್ ಮದ್ಯ ಮಾರಾಟ ಮಳಿಗೆಗಳನ್ನು ತೆರೆದು ವಿದೇಶಿ ಬ್ರಾಂಡ್ ಗಳ ಚಿಲ್ಲರೆ ಮದ್ಯ ಮಾರಾಟಕ್ಕೆ ಯೋಜನೆ ರೂಪಿಸಲಾಗಿದೆ.