ಔರಂಗಾಬಾದ್‌ನ ಸಿಡ್ಕೊ (CIDCO) ಏಮ್ಸ್ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಅವರ ಮೇಲೂ ಗುಂಪೊಂದು ಹಲ್ಲೆ ನಡೆಸಿದೆ. ಈ ಹಲ್ಲೆಯ ಘಟನೆಯನ್ನ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು, ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೈದ್ಯರ ಮೇಲೆ ಹಲ್ಲೆ ನಡೆಸಲಾಗಿರುವ ವಿಷಯ ಪೊಲೀಸರಿಗೆ, ಕೆಲವರು ಫೋನ್ ಮೂಲಕ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನ ಹತೋಟಿಗೆ ತರಲು ಯತ್ನಿಸಿದ್ಧಾರೆ. ಆದರೆ ಇಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜೊತೆ ಗಲಾಟೆ ಮಾಡಿದ್ದಲ್ಲದೇ, ಕೊರಳ ಪಟ್ಟಿ ಹಿಡಿದು ಥಳಿಸಿರುವುದನ್ನ ವಿಡಿಯೋದಲ್ಲಿ ಗಮನಿಸಬಹುದು.
ಹೀಗೆ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಕೈ ಮಾಡಿರುವವರು ಮೋರೆ ಕುಟುಂಬದ ಸದಸ್ಯರು ಎಂದು ಹೇಳಲಾಗುತ್ತಿದೆ. ಅಸಲಿಗೆ ಪೊಲೀಸರು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ತಕ್ಷಣ ರಸ್ತೆ ಮಧ್ಯದಲ್ಲಿ ನಿಂತಿರುವ ಕಾರನ್ನ ಪಕ್ಕಕ್ಕೆ ನಿಲ್ಲಿಸುವಂತೆ ಆ ಕಾರ್ ಮಾಲೀಕರನ್ನ ಕೇಳಿದ್ದಾರೆ. ಪೊಲೀಸರ ಮಾತನ್ನ ಕಿವಿಗೆ ಹಾಕಿಕೊಳ್ಳದ ಆರೋಪಿ ವಿತಂಡ ವಾದಕ್ಕೆ ಮುಂದಾಗಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಬೆಂಕಿ ಹಚ್ಚುವುದಾಗಿಯೂ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಾನಂದ ಗಜಾನನ ಮೋರೆ, ವಿಜಯ್ ಗಜಾನನ ಮೋರೆ ಸೇರಿದಂತೆ ಇನ್ನೊರ್ವ ವ್ಯಕ್ತಿಯನ್ನ ಆರೋಪಿಗಳೆಂದು ಗುರುತಿಸಿ ಬಂಧಿಸಲಾಗಿತ್ತು. ಆ ನಂತರ ನ್ಯಾಯಾಲಕ್ಕೆಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಯಿತು.