ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ವರ್ಗಾವಣೆ ದಂದೆ ಆರೋಪ, ಕಮಿಷನ್ ಆರೋಪಗಳನ್ನು ಮಾಡಿದ ಬೆನ್ನಲ್ಲೇ ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಕೇಳಿಬಂದಿದೆ.
ಬಿಬಿಎಂಪಿ ಗುತ್ತಿಗೆದಾರರು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೊಪ ಮಾಡಿದ್ದು, ಬಾಕಿ ಬಿಲ್ ಪಾವತಿಗಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿದ್ದಾರೆ.
ಡಿ.ಕೆ.ಶಿವಕುಮಾರ್ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡಲು ಹಣ ಕೇಳುತ್ತಿದ್ದಾರೆ. ಅವರು ಹಣ ಕೇಳಿಲ್ಲ ಎಂದಾದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಗುತ್ತಿಗೆದಾರ ಹೇಮಂತ್ ಎನ್ನುವವರು ಡಿ.ಕೆ.ಶಿವಕುಮಾರ್ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ವೇಳೆ ಗುತ್ತಿಗೆದಾರರ ನಡುವೆಯೇ ವಾಗ್ವಾದ ನಡೆದಿದ್ದು, ಈ ವೇಳೆ ಡಿ.ಕೆ.ಶಿವಕುಮಾರ್ ಹಣ ಕೇಳಿದ್ದಾರೆ. ಒಂದು ವೇಳೆ ಅವರು ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ, ಅವರು ಹಣ ಕೇಳಿದ್ದಾರೆ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದಿದ್ದಾರೆ. ನಾನು ನ್ಯಾಯಯುತವಾಗಿ ಕೆಲಸ ಮಾಡಿದ್ದೇನೆ. ಇಷ್ಟು ದಿನ ಬಿಲ್ ಪಾವತಿ ಮಾಡಿದವರು ಈಗ ಬಿಲ್ ಪಾವತಿ ತಡೆಯುತ್ತಿದ್ದಾರೆ. ಯಾಕೆ ಎಂಬುದನ್ನು ಹೇಳಲಿ. ಅಲ್ಲದೇ ಈಗ ಸಮಿತಿ ರಚನೆ ಮಾಡಿದ್ದಾರೆ. ನಾನೂ ಕೂಡ ಕಾಂಗ್ರೆಸ್ ಗೆ ಮತ ಹಾಕಿದ್ದೇನೆ. 94 ಕೋಟಿ ಬಿಲ್ ಬಾಕಿ ಬರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.