ಚಾಮರಾಜನಗರ: ಟೊಮೆಟೊ ಬೆಲೆ ಗಗನಕ್ಕೇರಿ ದಿನಬೆಳಗಾಗುವಷ್ಟರಲ್ಲಿ ಕೆಲವು ರೈತರು ಕೋಟ್ಯಧಿಪತಿಗಳಾಗಿದ್ದಾರೆ.
ಟೊಮೆಟೊ ರೀತಿಯಲ್ಲಿ ಅರಿಶಿಣಕ್ಕೂ ದಾಖಲೆ ಬೆಲೆ ಬಂದಿದ್ದು, ಅರಿಶಿಣ ಬೆಳೆಗಾರರ ಅದೃಷ್ಟ ಖುಲಾಯಿಸಿದೆ. ಬೆಲೆ ಕುಸಿತ, ಕನಿಷ್ಠ ಬೆಂಬಲ ಬೆಲೆಯೂ ಇಲ್ಲದೆ ನಿರೀಕ್ಷಿತ ಪ್ರಮಾಣದ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲವೆಂದು ಅರಿಶಿಣ ಬೆಳೆಗಾರರು ನಿರಾಸೆಯಾಗಿದ್ದರು. ಆದರೆ ಅದೃಷ್ಟ ಕೂಡಿ ಬಂದಿದ್ದು, ಬೆಲೆ ದಿಢೀರ್ ಏರಿಕೆ ಕಂಡಿದೆ.
ಅತಿ ದಪ್ಪ, ದಪ್ಪ ಮತ್ತು ಸಾಮಾನ್ಯ ಎಂದು ವಿಂಗಡಣೆ ಮಾಡಿದ ಅರಿಶಿಣವನ್ನು ಕ್ವಿಂಟಾಲ್ ಗೆ 22 ಸಾವಿರ ರೂ.ಗೆ ಮಾರಾಟ ಮಾಡಲಾಗಿದೆ. ಬೆಳಗಾವಿ ಜಿಲ್ಲೆಗೆ ಹೊಂದಿಕೊಂಡ ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅರಿಶಿಣ 22 ಸಾವಿರ ರೂ.ವರೆಗೆ ಮಾರಾಟವಾಗಿದೆ. ತಮಿಳುನಾಡಿನ ಈರೋಡ್ ಮಾರುಕಟ್ಟೆಯಲ್ಲಿ ವಿಂಗಡಣೆ ಆಧಾರದಲ್ಲಿ ಪಾಲಿಶ್ ಮಾಡಿದ ಅರಿಶೀಣ ಕ್ವಿಂಟಾಲ್ ಗೆ 15 ಸಾವಿರ ರೂ.ವರೆಗೆ ಮಾರಾಟವಾಗಿದೆ.
ಈಗಾಗಲೇ ಕ್ವಿಂಟಾಲ್ ಗೆ 6ರಿಂದ 7 ಸಾವಿರ ರೂ.ಗೆ ಅರಿಶಿಣ ಮಾರಾಟ ಮಾಡಿದ್ದ ರೈತರು ಕೈಕೈ ಹಿಸುಕಿಕಕೊಳ್ಳುವಂತಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ತಡವಾಗಿ ಆಗಮನವಾಗಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅರಿಶಿಣ ನಾಟಿ ಮಾಡಿಲ್ಲ. ಬೆಲೆ ಕುಸಿತ ಕಾರಣ ಚಾಮರಾಜನಗರ, ಗುಂಡ್ಲುಪೇಟೆ ಭಾಗದಲ್ಲಿಯೂ ಬೆಳೆ ಪ್ರದೇಶ ಕಡಿಮೆಯಾಗಿದೆ. ಕಳೆದ ವರ್ಷದ ಬೇಡಿಕೆ ಮತ್ತು ರಫ್ತು ಗಮನದಲ್ಲಿಟ್ಟುಕೊಂಡು ಪ್ರತಿಷ್ಠಿತ ಕಂಪನಿಯವರು ಮೊದಲೇ ಲಭ್ಯ ಅರಿಶಿಣ ಖರೀದಿಸಿ ದಾಸ್ತಾನು ಮಾಡಲು ಮುಂದಾಗಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ.