ವಿಜಯಪುರ: ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಗೆ ವಿದೇಶದಲ್ಲಿ ವರ್ಗಾವಣೆಯ ಬಗ್ಗೆ ಮಾಹಿತಿ ಸಿಕ್ಕಿತಾ ಎಂದು ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಕುಮಾರಸ್ವಾಮಿಗೆ ವರ್ಗಾವಣೆಯ ಬಗ್ಗೆ ಮಾಹಿತಿ ಕೊಟ್ಟರಾ? ಪೆನ್ ಡ್ರೈವ್ ಇದೆ ಎಂದು ಹೇಳಿ ಸುಮ್ಮನೆ ನಿಂದನೆ ಮಾಡಬಾರದು. ಕುಮಾರಸ್ವಾಮಿ ಪೆನ್ ಡ್ರೈವ್ ಹೊರಬರಲಿಲ್ಲ. ಅವರ ಬಳಿ ಪೆನ್ನೂ ಇಲ್ಲ, ಡ್ರೈವ್ ಇಲ್ಲ. ಅವರ ಅವಧಿಯಲ್ಲಿ ವರ್ಗಾವಣೆ ಆಗಿಯೇ ಇಲ್ವಾ? ಅವರ ಕಾಲದಲ್ಲೂ ಸಾಕಷ್ಟು ವರ್ಗಾವಣೆಗೆ ತಡೆಯಾಜ್ಞೆ ಆಗಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಅಸ್ಥಿರಗೊಳಿಸಲು ಆಗುವುದಿಲ್ಲ. ಮೊದಲು ಕುಮಾರಸ್ವಾಮಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ಇಲ್ಲೇ ಏನೂ ಮಾಡಲು ಆಗಲ್ಲ ವಿದೇಶದಲ್ಲಿ ಏನು ಮಾಡುತ್ತಾರೆ ಎಂದು ಹೆಚ್.ಡಿ.ಕೆ. ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಾವು 136 ಶಾಸಕರಿದ್ದೇವೆ. ಯಾರೂ ಸರ್ಕಾರ ಅಲುಗಾಡಿಸಲು ಆಗುವುದಿಲ್ಲ. ಸುಭದ್ರ ಸರ್ಕಾರ ನೀಡಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ವಾಮಾಚಾರ ಗೀಮಾಚಾರದ ಬಗ್ಗೆ ರೇವಣ್ಣನವರ ಬಳಿ ಕುಮಾರಸ್ವಾಮಿ ಕೇಳಲಿ. ರೇವಣ್ಣನವರನ್ನು ಕೇಳಿದರೆ ವಾಮಾಚಾರದ ಬಗ್ಗೆ ಹೇಳುತ್ತಾರೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.