ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದ 10 ಕೋಟಿ ನಕಲಿ ನೋಟು ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಫರ್ಜಿ ಸಿರೀಸ್ ಲಿಂಕ್ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ
ತಲಘಟ್ಟಪುರದಲ್ಲಿ ಕೆಲದಿನಗಳ ಹಿಂದೆ 10 ಕೋಟಿ ಮೊತ್ತದ ಜೆರಾಕ್ಸ್ ನೋಟುಗಳು ಪತ್ತೆಯಾಗಿದ್ದವು. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ನಾನಾ ಅನುಮನಗಳು ಆರಂಭವಾಗಿವೆ. ವೆಬ್ ಸಿರೀಸ್ ನೋಡಿ ಅದರಿಂದ ಪ್ರಭಾವಿತರಾಗಿ ಹಣ ಜೆರಾಕ್ಸ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಮೆಜಾನ್ ಪ್ರೈಮ್ ನಲ್ಲಿ ಕೆಲ ದಿನಗಳ ಹಿಂದೆ ‘ಫರ್ಜಿ’ ಎಂಬ ವೆಬ್ ಸಿರೀಸ್ ಭಾರಿ ಸುದ್ದಿ ಮಾಡಿತ್ತು. ಇದರಿಂದ ಪ್ರಭಾವಿತರಾಗಿ ಖದೀಮರು ನಕಲಿ ನೋಟು ತಯಾರಿಸುವ ದಂಧೆಗೆ ಇಳಿದಿರುವ ಸಾಧ್ಯತೆ ದಟ್ಟವಾಗಿದೆ.
500 ಮುಖ ಬೆಲೆಯ ಅಸಲಿ ನೋಟುಗಳನ್ನು ಪಡೆದು 2000 ಮುಖ ಬೆಲೆಯ ನಕಲಿ ನೋಟುಗಳನ್ನು ಕೊಡುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದರೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ 2000 ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದರಿಂದ, ನಕಲಿ ನೋಟುಗಳನ್ನು ದುಷ್ಕರ್ಮಿಗಳು ಎಸೆದು ಹೋಗಿರಬಹುದು. ಈ ನಿಟ್ಟಿನಲ್ಲಿ ತಲಘಟ್ಟಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನೊಂದು ಮಹತ್ವದ ವಿಚಾರವೆಂದರೆ 10 ಕೋಟಿ ಜೆರಾಕ್ಸ್ ನೋಟುಗಳ ಪಕ್ಕ ಚೊಂಬು ಪತ್ತೆಯಾಗಿದ್ದು, ಒಂದು ವೇಳೆ ರೈಸ್ ಪುಲ್ಲಿಂಗ್ ದಂಧೆಕೋರರು ನಕಲಿ ನೋಟು ದಂಧೆ ನಡೆಸಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಸಿದ್ದಾರೆ.