ಬುಧವಾರದಂದು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕರ್ನಾಟಕದ ನಾಯಕರೊಂದಿಗೆ ಕಾಂಗ್ರೆಸ್ ವರಿಷ್ಠರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಕರ್ನಾಟಕ ಭವನದಲ್ಲಿ ಈ ಭೇಟಿ ನಡೆದಿದ್ದು, ರಾಕೇಶ್ ಟಿಕಾಯತ್ ಅವರೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾದ ಡಾ. ಸನಿಲಂ ಕೂಡ ಇದ್ದರು ಎಂದು ತಿಳಿದುಬಂದಿದೆ. ಈ ಭೇಟಿ ಸಂದರ್ಭದಲ್ಲಿ ರೈತಪರ ಹೋರಾಟ ಸೇರಿದಂತೆ ಹಲವು ವಿಚಾರಗಳ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ವರಿಷ್ಠರ ಜೊತೆಗಿನ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ಕುರಿತಂತೆ ಸಮಾಲೋಚನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ ಕೆಲ ಶಾಸಕರು, ಸಚಿವರುಗಳ ಕಾರ್ಯವೈಖರಿ ಪ್ರಶ್ನಿಸಿರುವ ವಿಷಯವೂ ಪ್ರಸ್ತಾಪವಾಗಿದೆ ಎನ್ನಲಾಗಿದೆ.