HomeKarnatakaಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ಹೊಸ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಾಪನೆ

ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ಹೊಸ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಾಪನೆ

ಕಲಬುರಗಿ: ರಾಜ್ಯದಲ್ಲಿ ಹೊಸದಾಗಿ ರಚಿಸಲಾಗಿರುವ 63 ತಾಲೂಕುಗಳಲ್ಲಿ ತಾಲೂಕು ಮಟ್ಟದ ಕಚೇರಿ ಪೈಕಿ 20 ತಾಲೂಕುಗಳಲ್ಲಿ ಮೂಲಸೌಕರ್ಯ ಕಲ್ಪಿಸಿದ್ದು, ಉಳಿದ ತಾಲೂಕುಗಳಲ್ಲಿ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೂತನ ತಾಲೂಕುಗಳಲ್ಲಿ ಆದ್ಯತೆ ಮೇಲೆ ಮೂಲಸೌಕರ್ಯ ನೀಡಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಅಧಿಕಾರಿಗಳು ಸಹ ಇರುವ ವ್ಯವಸ್ಥೆಯಲ್ಲಿ ಮತ್ತಷ್ಟು ಸರಳೀಕರಣಕ್ಕೆ ಸಲಹೆ ನೀಡಿದ್ದಾರೆ ಎಂದರು.

ಕಲಬುರಗಿ ವಿಭಾಗದಲ್ಲಿ ಪಹಣಿ ತಿದ್ದುಪಡಿ, ವರ್ಗಾವಣೆ, ಕಂದಾಯ ನ್ಯಾಯಲಯಗಳ ಪ್ರಕರಣಗಳು ಸೇರಿದಂತೆ ಒಟ್ಟು 1.50 ಲಕ್ಷ ಕೇಸ್ ಬಾಕಿ ಇವೆ. ಇದರಲ್ಲಿ ಶೇ.75ರಷ್ಟು ಕ್ಲಿಷ್ಟಕರ ಅಲ್ಲದ ಪ್ರಕರಣಗಳಿದ್ದು, ಇವುಗಳನ್ನು ಮುಂದಿನ 3 ತಿಂಗಳಲ್ಲಿ ಅಭಿಯಾನದ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಹೊಸದಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಾಪನೆಗೆ ಮಾಹಿತಿ ಸಂಗ್ರಹ:

ರಾಜ್ಯದಲ್ಲಿ ಹೊಸದಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಾಪನೆ ಸಂಬಂಧ ಪ್ರಸ್ತುತ ಇರುವ ಎಸ್.ಆರ್.ಓ. ಕಚೇರಿಯಲ್ಲಿ ದೈನಂದಿನ ವ್ಯವಹಾರಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. 2 ತಿಂಗಳಿನಲ್ಲಿ ಮಾಹಿತಿ ಸಿಗಲಿದ್ದು, ತದನಂತರ ಹೆಚ್ಚಿನ ಕಾರ್ಯದೊತ್ತಡ ಇರುವ ತಾಲೂಕಿನಲ್ಲಿ ಹೊಸದಾಗಿ ಎಸ್.ಆರ್.ಓ. ಕಚೇರಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ನೋಂದಣಿ ಸೋರಿಕೆ ತಡೆಗೆ ಕ್ರಮ:

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿಗಳ ಮಾರಾಟ, ಒಪ್ಪಂದ ಪ್ರಕರಣದಲ್ಲಿ ನಿಗದಿತ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ದಾಖಲಿಸಿ ಸರ್ಕಾರಕ್ಕೆ ಬರಬೇಕಾದ ಕಂದಾಯ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪರಿಶೀಲನೆಗೆ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ತಂಡ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಿ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಸರ್ಕಾರಕ್ಕೆ ಆಗುತ್ತಿರುವ ನಷ್ಠ ತಪ್ಪಿಸಲಾಗುವುದು ಎಂದರು.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏಜೆಂಟ್ ಹಾವಳಿ ತಡೆಗೆ ಕಾವೇರಿ 2.0 ತಂತ್ರಾಂಶ ಜಾರಿಗೆ ತರಲಾಗಿದೆ. ಸಾರ್ವಜನಿಕರು ನೋಂದಣಿ ಮುನ್ನ ತಮ್ಮ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿದಾಗ ಸದರಿ ದಾಖಲೆಗಳು ಸರಿಯಾಗಿವೆ ಅಥವಾ ಇಲ್ಲ ಎಂಬುದನ್ನು ಆನ್‌ಲೈನ್ ಮೂಲಕವೇ 3 ದಿನದಲ್ಲಿ ನೋಂದಣಿ ಕಚೇರಿಯಿಂದ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ. ನಂತರ ಅರ್ಜಿದಾರ ನಿಗದಿತ ಶುಲ್ಕ ಪಾವತಿಸಿ ನೋಂದಣಿಗೆ ದಿನಾಂಕ ಮತ್ತು ಸಮಯ ಅರ್ಜಿದಾರನೇ ನಿಗದಿಗೊಳಿಸಲು ಅವಕಾಶ ನೀಡಲಾಗಿದೆ ಎಂದರು.

3 ಕಾಯ್ದೆಗೆ ತಿದ್ದುಪಡಿ:

ಕಂದಾಯ ವ್ಯವಸ್ಥೆಯಲ್ಲಿ ಮತ್ತಷ್ಟು ಸರಳೀಕರಣಗೊಳಿಸಲು ಕಳೆದ ಅಧಿವೇಶನದಲ್ಲಿ ಮೂರು ಮಸೂದೆಗೆ ತಿದ್ದುಪಡಿ ತರಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ಕೊಟ್ಟಿ ದಾಖಲೆ ಸೃಷ್ಟಿಸಿ ದುರಪಯೋಗದ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿರುವುದು ಕಂಡುಬಂದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳು ಕೈಗೆತ್ತಿಕೊಂಡು 3 ತಿಂಗಳ ಒಳಗಾಗಿ ಸದರಿ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ, ಮಹಾ ಯೋಜನೆ ಅನುಮೋದಿತ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಬಳಿ ಹೋಗದೆ ನೇರವಾಗಿ ನಗರ ಯೋಜನಾ ಕಚೇರಿ/ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲಿಸಿ ಪರಿವರ್ತನೆಗೆ ನಿಗದಿತ ಶುಲ್ಕ ಪಾವತಿ ಮಾಡಿ ಎನ್.ಎ. ಆಗಿ ಬದಲಾಯಿಸುವ ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978ಕ್ಕೆ ತಿದ್ದುಪಡಿ ತಂದು ಎಸ್.ಸಿ.-ಎಸ್.ಟಿ ಜನಾಂಗದವರ ಹಕ್ಕು ರಕ್ಷಿಸಲಾಗಿದೆ. ಇದು ಜನಪರ ಸರ್ಕಾರದ ಜನಪರ ನಿರ್ಧಾರಗಳಾಗಿವೆ. ಇದು ಜನಪರ ಆಡಳಿತಕ್ಕೆ ಸರ್ಕಾರಕ್ಕಿರುವ ಬದ್ಧತೆ ಪ್ರದರ್ಶಿಸುತ್ತದೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular