ಬೆಂಗಳೂರು : ನಾಳೆಯಿಂದ ದುನಿಯಾ ತುಂಬಾ ದುಬಾರಿಯಾಗಲಿದ್ದು, ಹಲವು ವಸ್ತು, ಪದಾರ್ಥಗಳ ಬೆಲೆ ಏರಿಕೆಯಾಗಲಿದೆ. ಈ ಮೂಲಕ ಮತ್ತೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ವಿದ್ಯುತ್ ದರ ಹಾಗೂ ಮದ್ಯದ ಬೆಲೆ ಏರಿಕೆ ನಡುವೆ ಹಾಲು, ಹೋಟೆಲ್ ಊಟ, ತಿಂಡಿ, ಟೊಮ್ಯಾಟೋ, ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಳವಾಗಲಿದೆ.
ನಂದಿನಿ ಹಾಲು
ನಂದಿನಿ ಹಾಲಿನ ದರ 3 ರೂ. ಏರಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಆಗಸ್ಟ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ. ನಂದಿನಿ ಹಾಲಿನ ದರ 3 ರೂ ಹೆಚ್ಚಳವಾಗಲಿದೆ. ಹಾಲಿನ ದರ ಹೆಚ್ಚಳ ಹಿನ್ನೆಲೆ ಕಾಫಿ-ಟೀ ಬೆಲೆಯೂ ಹೆಚ್ಚಳವಾಗಲಿದ್ದು, ಹೋಟೆಲ್ ಕಾಫಿ ಟೀ ದರದಲ್ಲಿ 1% ದರ ಹೆಚ್ಚಿಸಲು ನಿರ್ಧರಿಸಲಾಗಿದೆ.
ಹೋಟೆಲ್ ಊಟ, ತಿಂಡಿ ಬೆಲೆಯೂ ಹೆಚ್ಚಳ
ಇದೆಲ್ಲದರ ನಡುವೆ ಸದ್ದಿಲ್ಲದೇ ಹೋಟೆಲ್ ಊಟ-ತಿಂಡಿ ಬೆಲೆ ಕೂಡ ಹೆಚ್ಚಳವಾಗಲಿದೆ. ಹೌದು. ಬಿಸಿ ಬೇಳೆಬಾತ್ 45 ರಿಂದ 55 ರೂ, ರೈಸ್ ಪೂರಿ 45 ರಿಂದ 50 ರೂ. ಮಸಾಲೆ ದೋಸೆ 60 ರೂ., ಉದ್ದಿನ ವಡೆ 15 ರೂ. ಪೂಳಿಯೊಗರೆ 40-50 ರೂ., ಇಡ್ಲಿ ವಡೆ 30 ರಿಂದ 50 ರೂ.ವರೆಗೆ, ಟಿ ಮತ್ತು ಕಾಫಿ 12 ರಿಂದ 15 ರೂ. ಬಾದಾಮಿ ಹಾಲು 18 ರೂಗೆ ಏರಿಕೆ ಮಾಡಲಾಗುತ್ತದೆ. ಕರ್ಡ್ ರೈಸ್ 45-55 ರೂಗೆ ಏರಿಕೆಯಾಗಲಿದೆ.
ಅನ್ನಸಾಂಬಾರ್ 50 ರೂ. ನಿಂದ 60 ಕ್ಕೆ ಏರಿಸಲಾಗಿದೆ. ಫುಲ್ ಮೀಲ್ಸ್ ಬೆಲೆ 50 ರಿಂದ 70 ರೂ. ಏರಿಕೆ ಮಾಡಲಾಗಿದೆ. ಕಾಫಿ ಹಾಗೂ ಟೀ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ, ತಿಂಡಿ ತಿನಿಸುಗಳ ಬೆಲೆ 5ರಿಂದ 10 ರೂಪಾಯಿಗಳಷ್ಟು ಏರಿಕೆಯಾಗಲಿದೆ. ರೈಸ್ ಬಾತ್ 40 ರಿಂದ 45 ರೂ ಗೆ ಹೆಚ್ಚಳ, ಇಡ್ಲಿ (2 ಕ್ಕೆ) 40-50. ಸೆಟ್ ದೋಸೆ 60-65, ಬೆಣ್ಣೆ ಮಸಾಲೆ ದೋಸೆ 70-80 ರೂಗೆ ಏರಿಕೆಯಾಗಲಿದೆ.
ಟೊಮೆಟೊ ದರ ಮತ್ತಷ್ಟು ಏರಿಕೆ
ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಟೊಮೆಟೊ ದರ ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ. ಇಂದು ಕೆಜಿ ಟೊಮೆಟೊ ಬೆಲೆ 150 ರೂಪಾಯಿಯಿಂದ 160 ರೂಪಾಯಿ ಆಗಿದೆ.
ಕಳೆದ ಒಂದುವಾರದಿಂದ ಏರಿಳಿತವಾಗುತ್ತಿದ್ದ ಟೊಮೆಟೊ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ. ವಾರದಿಂದ ಕೆಜಿ ಟೊಮೆಟೊಗೆ 80 ರೂಪಾಯಿಯಿಂದ 90 ರೂಪಾಯಿ, ಆಗಾಗ 100ರ ಗಡಿ ದಾಟುತ್ತಿದ್ದ ಟೊಮೆಟೊ ಇಂದು ಏಕಾಏಕಿ 160 ರೂಪಾಯಿವರೆಗೆ ತಲುಪಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
KSRTC ಬಾಡಿಗೆ ಹೆಚ್ಚಳ
ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ‘ಶಕ್ತಿ ಯೋಜನೆ’ ಜಾರಿಗೆ ಬಂದ ಪರಿಣಾಮ ಸಿಎಂ ಸಿದ್ದರಾಮಯ್ಯ ಸರ್ಕಾರ ತನ್ನ ಬೊಕ್ಕಸಕ್ಕೆ ಆದ ನಷ್ಟವನ್ನು ಸರಿದೂಗಿಸಲು ಮತ್ತೊಂದು ಹೊಸ ಪ್ಲ್ಯಾನ್ ಮಾಡಿದೆ. ಹೌದು. ಇದೀಗ ಕೆಎಸ್ ಆರ್ ಟಿಸಿ ಬಸ್ ಬಾಡಿಗೆ ದರ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಆದಾಯದ ಮೂಲ ಹೆಚ್ಚಿಸುವ ಸಲುವಾಗಿ ಕೆಎಸ್ ಆರ್ ಟಿಸಿ ಈ ಭರ್ಜರಿ ಪ್ಲ್ಯಾನ್ ಮಾಡಿದೆ. ಮದುವೆ, ಪ್ರವಾಸ ಹಾಗೂ ಇನ್ನಿತರ ಸಮಾರಂಭಗಳಿಗೆ ಬಾಡಿಗೆಗೆ ಪಡೆಯುವ ಕರ್ನಾಟಕ ಸಾರಿಗೆ, ರಾಜಹಂಸ, ಎಕ್ಸಿಕ್ಯೂಟಿವ್, ರಾಜಹಂಸ ಬಸ್ಗಳ ದರ ಏರಿಕೆ ಮಾಡಲಿದೆ . ಹೊಸ ಪರಿಷ್ಕ್ರತ ದರಗಳು ಆಗಸ್ಟ್ ಒಂದನೇ ತಾರೀಖಿನಿಂದ ಜಾರಿಗೆ ಬರಲಿದೆ.
ಮದ್ಯದ ಬೆಲೆ ಹೆಚ್ಚಳ
ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮದ್ಯದ ಬೆಲೆ ಕೂಡ ಈಗಾಗಲೇ ಏರಿಕೆಯಾಗಿದೆ. ಬಿಯರ್ ಹಾಗೂ ಹಾಟ್ ಡ್ರಿಂಕ್ಸ್ ಗಳ ಬೆಲೆ ಹೆಚ್ಚಳವಾಗಿದೆ.
ಹೋಂಡಾ ಕಾರುಗಳ ಬೆಲೆ ಹೆಚ್ಚಳ : ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರುಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಿದೆ. ಆಗಸ್ಟ್ ನಲ್ಲಿ ಬೆಲೆ ಏರಿಕೆಯಾಗಲಿದೆ. ಆದ್ರೆ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
RBI ಸಾಲ ನೀತಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀತಿಯನ್ನು ಆಗಸ್ಟ್ ನಲ್ಲಿ ಪ್ರಕಟಿಸಲಿದೆ. ಬಡ್ಡಿದರಗಳಲ್ಲಿನ ಬದಲಾವಣೆಯನ್ನು ಹಣಕಾಸು ನೀತಿ ಸಮಿತಿ ನಿರ್ಧರಿಸಲಿದೆ. ಎಂಪಿಸಿಯ ಈ ಸಭೆ ಆಗಸ್ಟ್ 4-6 ರ ನಡುವೆ ನಡೆಯಲಿದೆ.