ಚಿಕ್ಕಮಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಆಗಸ್ಟ್ 5 ರಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಜುಲೈ ಒಂದರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿದೆ. ಆದರೆ ಕಲಬುರಗಿಯಲ್ಲಿ ಅಧಿಕೃತವಾಗಿ ಚಾಲನೆಯನ್ನು ಅಗಸ್ಟ್ 5 ಕ್ಕೆ ನೀಡಲಾಗುವುದು. ಇದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು. ಜೂನ್ 25 ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳಿಗೆ ಜುಲೈ ತಿಂಗಳಿನಿಂದ ಶೂನ್ಯ ವಿದ್ಯುತ್ ಬಿಲ್ ಸಿಗಲಿದೆ ಎಂದರು.
ಜೂನ್ ತಿಂಗಳಿನ ವಿದ್ಯುತ್ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳ ಶುಲ್ಕ ಕೂಡ ಸೇರ್ಪಡೆಯಾಗಿದ್ದರೆ ಹೆಚ್ಚುವರಿ ದಿನಗಳ ಹಣ ನಿಮಗೆ ಮರುಪಾವತಿಯಾಗಲಿದೆ ಎಂದರು. ಜೂನ್ ತಿಂಗಳ ವಿದ್ಯುತ್ ಬಿಲ್ನಲ್ಲಿ ಸ್ವಲ್ಪ ಗೊಂದಲಗಳಿತ್ತು. ಆ ತಿಂಗಳ ಬಿಲ್ನಲ್ಲಿ ಜುಲೈ ತಿಂಗಳ ಕೆಲವು ದಿನಗಳು ಸೇರಿಕೊಂಡಿವೆ. ಅಂತಹ ಗ್ರಾಹಕರಿಗೆ ಕ್ರೆಡಿಟ್ ಕೊಡುತ್ತೇವೆ. ಬಾಕಿ ಮೊತ್ತ ಇಲ್ಲದಿದ್ದರೆ ನಾಲ್ಕು ತಿಂಗಳ ಬಳಿಕ ಹಣ ಹಿಂದಿರುಗಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.