ನಾವೆಲ್ಲರೂ ಸಾಮಾನ್ಯವಾಗಿ ದಿನದಲ್ಲಿ ಕನಿಷ್ಠ ಮೂರು ಬಾರಿ ಆಹಾರ ಸೇವಿಸುತ್ತೇವೆ. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ. ಇದು ದೇಹದ ಪೋಷಣೆ ಮತ್ತು ನಮ್ಮ ಒಟ್ಟಾರೆ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಎಷ್ಟೋ ಜನರು ರಾತ್ರಿ ಊಟ ಮಾಡದೇ ಮಲಗಿಕೊಳ್ತಾರೆ. ಕಚೇರಿ ಕೆಲಸ ಮುಗಿಸಿ ಸುಸ್ತಾಗಿ ಬಂದು ಮಲಗಿದ ತಕ್ಷಣ ನಿದ್ರೆಗೆ ಜಾರುತ್ತಾರೆ. ಕೆಲವರು ರಾತ್ರಿ ಊಟ ಮಾಡದಿದ್ದರೆ ತೂಕ ಕಡಿಮೆಯಾಗುತ್ತದೆಂದು ಭಾವಿಸುತ್ತಾರೆ. ಆದರೆ ರಾತ್ರಿ ಊಟ ಬಿಡುವುದು ಎಷ್ಟು ಸರಿ? ರಾತ್ರಿಯ ಊಟವನ್ನು ತ್ಯಜಿಸುವುದರಿಂದ ಯಾವ ರೀತಿಯ ಕೆಟ್ಟ ಪರಿಣಾಮಗಳು ಉಂಟಾಗಬಹುದು ಎಂಬುದನ್ನು ತಿಳಿಯೋಣ.
ದೇಹದಲ್ಲಿ ಪೋಷಕಾಂಶಗಳ ಕೊರತೆ : ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ರಾತ್ರಿ ಆಹಾರ ಸೇವಿಸದೇ ಇರುವುದು ದೊಡ್ಡ ತಪ್ಪು. ಈ ರೀತಿ ಮಾಡುವುದರಿಂದ ಅವರ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಮತ್ತು ದೇಹವು ಅಪೌಷ್ಟಿಕತೆಗೆ ಬಲಿಯಾಗುತ್ತದೆ. ಇದರ ಪರಿಣಾಮ ನಮ್ಮ ದೇಹದ ಕಾರ್ಯಾಚರಣೆ ಮೇಲಾಗುತ್ತದೆ. ನೀವು ದುರ್ಬಲತೆ ಮತ್ತು ರಕ್ತಹೀನತೆಯನ್ನು ಅನುಭವಿಸಬಹುದು.
ಶಕ್ತಿಯ ಕೊರತೆ : ಅಡುಗೆ ಮಾಡಲು ಬೇಸರಿಸಿಕೊಂಡು ರಾತ್ರಿ ಊಟ ಮಾಡದಿದ್ದರೆ ಅದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದು ಕೆಟ್ಟ ಅಭ್ಯಾಸ. ಮಲಗಿದಾಗ ನಾವು ದೈಹಿಕ ಚಟುವಟಿಕೆಗಳನ್ನು ಮಾಡದಿದ್ದರೂ ಸಹ ನಮ್ಮ ಮೆದುಳು ಕೆಲಸ ಮಾಡುತ್ತಿರುತ್ತದೆ. ರಾತ್ರಿ ಉಪವಾಸ ಮಲಗುವುದರಿಂದ ದೌರ್ಬಲ್ಯ ಮತ್ತು ಆಯಾಸ ಉಂಟಾಗಬಹುದು.
ನಿದ್ರೆಗೆ ತೊಂದರೆ : ರಾತ್ರಿ ಊಟ ಮಾಡದೇ ಇರುವುದರಿಂದ ತಡರಾತ್ರಿ ಇದ್ದಕ್ಕಿದ್ದಂತೆ ಹಸಿವಾಗಬಹುದು. ಇದರಿಂದಾಗಿ 8 ಗಂಟೆಗಳ ಕಾಲ ಶಾಂತವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಆಯಾಸ ಮತ್ತು ಆಲಸ್ಯ ನಿಮ್ಮನ್ನು ಕಾಡಬಹುದು.