ಚಿಕ್ಕೋಡಿ : ರಾಜ್ಯ ಸರ್ಕಾರ, ಸಚಿವರುಗಳ ಆದೇಶಕ್ಕೂ ಡೋಂಟ್ ಕೇರ್ ಎನ್ನದೇ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಸಿಬ್ಬಂದಿಗಳು ಹಣ ಪಡೆಯುತ್ತಿರುವ ಆರೋಪಗಳು ಸಾಲು ಸಾಲಾಗಿ ಕೇಳಿಬರುತ್ತಿದೆ.ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರೂರಲ್ಲೇ ಗ್ರಾಮ್ ಒನ್ ಸಿಬ್ಬಂದಿ ಧಮ್ಕಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ್ ಒನ್ ಕೇಂದ್ರದಲ್ಲಿ ನಡೆದಿದೆ.
ಇಲ್ಲಿನ ಸಿಬ್ಬಂದಿ ಪ್ರತಿಯೊಬ್ಬರಿಂದ 100 ರೂ ವಸೂಲಿ ಮಾಡುತ್ತಿದ್ದಾನೆ. ಸಿಬ್ಬಂದಿಯನ್ನು ಪ್ರಶ್ನಿಸಲು ಹೋದ್ರೆ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ. ನಾನು 100 ರೂ.ತೆಗೆದುಕೊಂಡೇ ಅರ್ಜಿ ಹಾಕುತ್ತೇನೆ, ಏನ್ ಇವಾಗ..? ನೀವು ಯಾರನ್ನ ಬೇಕಾದರೂ ಕರೆದುಕೊಂಡು ಬನ್ನಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಬೇಕಾದರೂ ಕರೆದುಕೊಂಡು ಬನ್ನಿ…ಡೋಂಟ್ ಕೇರ್…ಇಲ್ಲಿ ನಾವೇನು ಬಿಟ್ಟಿ..ಕೂತಿದ್ದೀವಾ.. ಲಕ್ಷ್ಮಿ ಹೆಬ್ಬಾಳ್ಕರ್ ನೀವು ಸೇರಿಕೊಂಡು ನನಗೆ 18 ಸಾವಿರ ಹಾಕಿ..ಆಗ ಫ್ರೀ ಆಗಿ ಮಾಡುತ್ತೀನಿ ಎಂದು ಧಮ್ಕಿ ಹಾಕಿದ್ದಾನೆ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹಾಗೂ ವಿಜಯಪುರ ಪಟ್ಟಣದಲ್ಲಿ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಲು ಜನರಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.ಅರ್ಜಿ ಸಲ್ಲಿಸಲು ಬರುವವರಿಂದ 100 ರಿಂದ 300 ರೂಪಾಯಿ ಚಾರ್ಜ್ ಮಾಡಲಾಗುತ್ತಿದ್ದು, ಹಣ ಪಡೆಯದಂತೆ ಸರ್ಕಾರ ಆದೇಶ ಮಾಡಿದ್ರು ಕೂಲಿ ಕಾರ್ಮಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಪ್ರತಿನಿತ್ಯ ನೂರಾರು ಜನರಿಂದ ಸಿಬ್ಬಂದಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಹಿಳೆಯರಿಗೆ ಮಾಸಿಕ 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.ಗೃಹಲಕ್ಷ್ಮಿ ಯೋಜನೆ ನೋಂದಣಿ ಉಚಿತವಾಗಿದ್ದು, ಅರ್ಜಿ ಸಲ್ಲಿಕೆಗೆ ಯಾವುದೇ ಹಣ ನೀಡುವಂತಿಲ್ಲ. ಅರ್ಜಿಗೆ ಹಣ ಪಡೆದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಯಾವ ಆದೇಶಕ್ಕೂ ಕ್ಯಾರೇ ಎನ್ನದೇ ಸಿಬ್ಬಂದಿಗಳು ಹಣ ವಸೂಲಿ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.