ಶಿಕ್ಷಣ ಪೂರೈಸಿದ ತಕ್ಷಣ ಕೆಲಸಕ್ಕೆ ಸೇರುವುದು ಎಲ್ಲರ ಗುರಿ. ವೃತ್ತಿ ಬದುಕು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವೃತ್ತಿ ಜೀವನದ ಯಶಸ್ಸು ಪ್ರತಿಯೊಬ್ಬರಿಗೂ ಮುಖ್ಯ. ಇಲ್ಲಿ ಚೆನ್ನಾಗಿ ಕೆಲಸ ಮಾಡುವುದಷ್ಟೇ ಮುಖ್ಯವಲ್ಲ, ಸಹೋದ್ಯೋಗಿಗಳ ಜೊತೆಗೆ ಉತ್ತಮ ಸಂಬಂಧ, ಕಚೇರಿಯಲ್ಲಿ ಒಳ್ಳೆಯ ಹೆಸರು ಗಳಿಸುವುದು ಸವಾಲಿನ ಕೆಲಸವೇ.
ಯಾವುದೇ ಕೆಲಸವನ್ನು ಚುರುಕಾಗಿ, ವೇಗವಾಗಿ ಮಾಡಿ ಮುಗಿಸುವ ಸಾಮರ್ಥ್ಯ ಇರುವವರು ಬಹಳ ಬೇಗ ಜನಪ್ರಿಯತೆ ಗಳಿಸುತ್ತಾರೆ. ಮತ್ತೆ ಕೆಲವರು ಶ್ರಮಜೀವಿಗಳಾಗಿ ತಮ್ಮ ಕೆಲಸದಲ್ಲಿ ಹೆಚ್ಚು ಶ್ರದ್ಧೆ ಹಾಗೂ ನಿಷ್ಠೆಯನ್ನು ತೋರಿಸುತ್ತಾ ಎಲ್ಲರಲ್ಲೂ ಗೌರವ ಸಂಪಾದಿಸುತ್ತಾರೆ.
ಇವೆರಡಲ್ಲದೆ ಇನ್ನೂ ಒಂದಷ್ಟು ಜನ ಗಾಸಿಪ್ ಗಳನ್ನು ಸೃಷ್ಟಿಸುತ್ತಾ, ಮೈಗಳ್ಳತನ ತೋರುತ್ತಾ ಬಹಳ ಜಾಣತನದಿಂದ ತಮ್ಮ ಕೆಲಸವನ್ನು ಮತ್ತೊಬ್ಬರಿಗೆ ವರ್ಗಾಯಿಸುವುದರಲ್ಲಿ ನಿಸ್ಸೀಮರು. ಇವರ ಜೊತೆ ವ್ಯವಹರಿಸುವಾಗ ಎಚ್ಚರದಿಂದ ಇರಬೇಕು. ಸಾಮಾನ್ಯವಾಗಿ ಇಂಥ ಜನರು ಬೆಣ್ಣೆಯಲ್ಲಿ ಅದ್ದಿದ ರೀತಿ ಮಾತನಾಡಿ ಮೆಲ್ಲನೆ ತಮ್ಮ ಹೆಗಲ ಮೇಲಿನ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವರ್ಗಾಯಿಸಿ, ತಾವು ಹೆಸರು ಗಳಿಸುವುದೇ ಅಭ್ಯಾಸ ಮಾಡಿಕೊಂಡಿರುತ್ತಾರೆ.
ಯಾವುದೇ ಸಹೋದ್ಯೋಗಿಯ ಮಾತುಗಳು ಅದು ಹೊಗಳಿಕೆಯೋ, ತೆಗಳಿಕೆಯೋ ಯಾವುದನ್ನೂ ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳದೆ ಇರುವುದೇ ಲೇಸು. ಹೊಗಳಿಕೆಗೆ ಮರುಳಾಗಿ ಹೆಚ್ಚಿನ ಕೆಲಸವನ್ನು ಮೈ ಮೇಲೆ ಎಳೆದುಕೊಳ್ಳುವುದೂ, ತೆಗಳಿಕೆ ಕುಗ್ಗಿ ಹೋಗಿ ಆತ್ಮವಿಶ್ವಾಸ ಕಳೆದುಕೊಳ್ಳುವುದು ಎರಡೂ ಅಪಾಯಕಾರಿಯೇ.