10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು ಸದರಿ ವಿಳಾಸದಲ್ಲಿಯೇ ಈಗಲೂ ಮುಂದುವರೆದರೂ ಸಹ ಅಂತಹ ಆಧಾರ್ ಕಾರ್ಡ್‍ಗಳು ನಿಷ್ಕ್ರೀಯವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಪಡೆದು 10 ವರ್ಷ ಮೇಲ್ಪಟ್ಟ ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ್ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಯ.ಐ.ಡಿ.ಎ.ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ ಮಾಡಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ನವೀಕರಣಗೊಳಿಸಬೇಕು. ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ ಜಿಲ್ಲೆಯ ನಾಗರಿಕರು ಆಧಾರ್ ನೊಂದಣಿ ಮಾಡಿಕೊಳ್ಳಬೇಕು. ಅಲ್ಲದೆ ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.
ಸೇವಾ ಶುಲ್ಕ: ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ನವೀಕರಣವು ಉಚಿತವಾಗಿರುತ್ತದೆ. ಉಳಿದಂತೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್ ನಂಬರಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ 50 ರೂ. ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ 100 ರೂ.ಗಳ ಸೇವಾ ಶುಲ್ಕ ಇದ್ದು, ಸಾರ್ವಜನಿಕರು ಇದಕ್ಕಿಂತ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.