ಬೆಂಗಳೂರು : 10 ನಿಮಿಷ ತಡಮಾಡಿದ ರಾಜ್ಯಪಾಲರನ್ನೇ ಏರ್ ಏಷ್ಯಾ ವಿಮಾನವೊಂದು ಬಿಟ್ಟು ಹಾರಿದ ಘಟನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೈದರಾಬಾದ್ ಗೆ ಪ್ರಯಾಣ ಬೆಳೆಸಲು ವಿಮಾನ ನಿಲ್ದಾಣಕ್ಕೆ ತುಸು ತಡವಾಗಿ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ವಿಮಾನ ಹಾರಿದೆ.
ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ರಾಜ್ಯಪಾಲರು ಶಿಷ್ಟಾಚಾರ ಉಲ್ಲಂಘಿಸಿದ ಏರ್ ಏಷ್ಯಾ ವೈಮಾನಿಕ ಸಂಸ್ಥೆ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಬಳಿಕ ಏರ್ ಏಷ್ಯಾ ಸಂಸ್ಥೆಗೆ ಸೇರಿದ ಮತ್ತೊಂದು ವಿಮಾನದಲ್ಲಿ ರಾಜ್ಯಪಾಲರು ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಗುರುವಾರ ಮಧ್ಯಾಹ್ನ 2 ಕ್ಕೆ ಹೈದರಾಬಾದ್ ಗೆ ತೆರಳಲು ಏರ್ ಏಷ್ಯಾ ವಿಮಾನದ ಟಿಕೆಟ್ ಬುಕ್ ಆಗಿತ್ತು, ಆದರೆ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು ಬರುವುದು 10 ನಿಮಿಷ ತಡವಾಗಿದೆ. ಆದರೆ ರಾಜ್ಯಪಾಲರನ್ನು ಬಿಟ್ಟು ವಿಮಾನ ಹಾರಿದೆ. ಘಟನೆಯಿಂದ ಮುಜುಗೊರಕ್ಕೊಳಗಾದ ರಾಜ್ಯಪಾಲರು , ರಾಜ್ಯದ ಮೊದಲ ಪ್ರಜೆಯಾದ ತಮಗೆ ಅಗೌರವ ಸೂಚಿಸಲಾಗಿದೆ, ಶಿಷ್ಟಾಚಾರ ಉಲ್ಲಂಘಿಸಿದ ಏರ್ ಏಷ್ಯಾ ವೈಮಾನಿಕ ಸಂಸ್ಥೆ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ.