ಪಾಕಿಸ್ತಾನದಲ್ಲಿರುವ ತನ್ನ ಪ್ರಿಯತಮನಿಗಾಗಿ ಭಾರತದಿಂದ ತೆರಳಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನಿಖಾಹ್ ಕೂಡ ಮಾಡಿಕೊಂಡಿರುವ ಅಂಜು ಬಗ್ಗೆ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕೆ ನಮ್ಮ ಪಾಲಿಗೆ ಸತ್ತಿದ್ದಾಳೆ. ನಮಗೂ ಅವಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಭಾರತೀಯ ಮೂಲದ ಅಂಜು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ದೂರದ ಹಳ್ಳಿಗೆ ಕಾನೂನು ಬದ್ಧವಾಗಿ ತೆರಳಿದ್ದರು. ತನ್ನ ಪಾಕಿಸ್ತಾನದ ಪ್ರೇಮಿ ನಸ್ರುಲ್ಲಾ ಜೊತೆ ಮದುವೆಯಾಗುವ ಮುನ್ನ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎನ್ನಲಾಗಿದೆ.
ಅಂಜು ಪ್ರಸ್ತುತ ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾಳೆ ಎನ್ನಲಾಗಿದೆ. ಈ ವಿಚಾರವಾಗಿ ಮಾತನಾಡಿದ ಅಂಜು ತಂದೆ, ಆಕೆ ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ. ಅವಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಕಳೆದೊಂದು ವರ್ಷದಿಂದ ನಾನು ಅವರೊಂದಿಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ತನ್ನ ಪತಿಯನ್ನು ಮಾತ್ರವಲ್ಲದೇ ಮಕ್ಕಳನ್ನೂ ತೊರೆದು ಪ್ರಿಯತಮನಿಗಾಗಿ ತೆರಳಿದವಳ ಜೊತೆ ನಾವೇನು ಸಂಬಂಧ ಇಟ್ಟುಕೊಳ್ಳೋದು ಎಂದು ಪ್ರಶ್ನೆ ಮಾಡಿದ್ದಾರೆ. ಅಂಜು ಭಾರತಕ್ಕೆ ಮರಳಿದಾಗೆ ಆಕೆಯನ್ನು ಮಾತನಾಡಿಸುತ್ತೀರೇ..? ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆಕೆ ಸತ್ತರೂ ನಮಗೆ ಸಂಬಂಧವಿಲ್ಲ ಎಂದಿದ್ದಾರೆ.