ನವದೆಹಲಿ: ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಉಭಯ ಸದನಗಳ ವಿರೋಧ ಪಕ್ಷದ ನಾಯಕರಿಗೆ ಸರ್ಕಾರವು ಚರ್ಚೆಗೆ ಸಿದ್ಧವಾಗಿದೆ ಎಂದು ಪತ್ರ ಬರೆದಿದ್ದಾರೆ.
ಅವರಿಗೆ(ವಿರೋಧ) ಸಹಕಾರದಲ್ಲಿ ಆಸಕ್ತಿಯಿಲ್ಲ, ಅವರಿಗೆ ದಲಿತರ ಬಗ್ಗೆ ಆಸಕ್ತಿ ಇಲ್ಲ, ಮಹಿಳೆಯರ ಕಲ್ಯಾಣದಲ್ಲಿ ಆಸಕ್ತಿ ಇಲ್ಲ, ನಾನು ಮಣಿಪುರದ ಬಗ್ಗೆ ವಿಸ್ತೃತ ಚರ್ಚೆಗೆ ಸಿದ್ಧ ಎಂದು ನಾನು ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದೇನೆ. ಸರ್ಕಾರಕ್ಕೆ ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.
ನಮ್ಮಲ್ಲಿ ಮುಚ್ಚಿಡಲು ಏನೂ ಇಲ್ಲ, ನಾವು ಚುನಾವಣೆಗೆ ಹೋಗಬೇಕಾಗಿದೆ ಮತ್ತು ಜನರು ನಿಮ್ಮನ್ನು ಗಮನಿಸುತ್ತಿದ್ದಾರೆ. ಮಣಿಪುರದ ಈ ಸೂಕ್ಷ್ಮ ವಿಷಯದ ಬಗ್ಗೆ ಚರ್ಚೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿ ಎಂದು ಶಾ ತಿಳಿಸಿದ್ದಾರೆ.
ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ(ರಾಜ್ಯಸಭೆ) ಮತ್ತು ಅಧೀರ್ ರಂಜನ್ ಚೌಧರಿ (ರಾಜ್ಯಸಭೆ) ಅವರಿಗೆ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ.
ಮಣಿಪುರದ ಸಮಸ್ಯೆಯನ್ನು ಚರ್ಚಿಸಲು ಸರ್ಕಾರವು ಸಿದ್ಧವಾಗಿದೆ ಮತ್ತು ಎಲ್ಲಾ ಪಕ್ಷಗಳ ಸಹಕಾರವನ್ನು ಕೋರುತ್ತದೆ. ಈ ಪ್ರಮುಖ ಸಮಸ್ಯೆಯನ್ನು ಪರಿಹರಿಸುವಲ್ಲಿ ಎಲ್ಲಾ ಪಕ್ಷಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತನಾಡುವಂತೆ ಮಾಡುವ ಪ್ರಯತ್ನದಲ್ಲಿ ವಿರೋಧ ಪಕ್ಷವಾದ ‘ಇಂಡಿಯಾ’ ಮೈತ್ರಿಕೂಟದ ಕೆಲವು ಪಕ್ಷಗಳು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ವರದಿಯಾದ ಕೆಲವೇ ಗಂಟೆಗಳ ನಂತರ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಮಣಿಪುರ ವಿಷಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸುವ ಮೊದಲು ಪ್ರಧಾನಿಯವರ ಹೇಳಿಕೆಗೆ ಪಟ್ಟು ಹಿಡಿದಿದ್ದರಿಂದಾಗಿ ಬಿಕ್ಕಟ್ಟು ಉಂಟಾಗಿದೆ. ಮಣಿಪುರದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯು ಆತಂಕಕ್ಕೆ ಕಾರಣವಾಗಿದ್ದು, ಮೇ 3 ರಂದು ಜನಾಂಗೀಯ ಹಿಂಸಾಚಾರವು ಪ್ರಾರಂಭವಾದಾಗಿನಿಂದ 160 ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದೆ ಮತ್ತು ಹಲವಾರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಪ್ರಧಾನಿ ಮೌನ ವಹಿಸಿದ್ದಾರೆ ಎಂದು ವಿಪಕ್ಷಗಳು ದೂರಿವೆ.