ಕೊಪ್ಪಳ : ಬಿಜೆಪಿಯಲ್ಲಿ ಯಾವ ಶಾಸಕರು ಇರಲ್ಲ , ಶೀಘ್ರದಲ್ಲೇ ಕೆಲವು ಜೆಡಿಎಸ್ , ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ, ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಇನ್ನೂ ಹತ್ತು ಹದಿನೈದು ವರ್ಷ ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಮುಂದೆ ಜೆಡಿಎಸ್ ನಲ್ಲಿ, ಬಿಜೆಪಿಯಲ್ಲಿ ಯಾವ ಶಾಸಕರು ಇರಲ್ಲ. ಜೆಡಿಎಸ್ , ಬಿಜೆಪಿ ಶಾಸಕರು ಕಾಂಗ್ರೆಸ್ ಬರ್ತಾರೆ ಎಂದರು.
ಸಚಿವರ ವಿರುದ್ದ ಸಿಎಂಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಆ ಬಗ್ಗೆ ನನಗೆ ಗೊತ್ತಿಲ್ಲ, ಶಾಸಕರ ಕೆಲಸವನ್ನು ಸಚಿವರು ಮಾಡಲೇಬೇಕು. ಮುಖ್ಯಮಂತ್ರಿಗಳು ಏನು ಸೂಚನೆ ಕೊಡುತ್ತಾರೋ ಆ ಕೆಲಸ ಮಾಡಬೇಕು. ನನ್ನ ಇಲಾಖೆಯ ಎಲ್ಲಾ ಕೆಲಸಗಳನ್ನು ಮಾಡಿ ಕೊಡುತ್ತಿದ್ದೇನೆ. ಆ ತೃಪ್ತಿ ನನಗಿದೆ. ಅಷ್ಟು ಸಾಕು ಎಂದರು.
ಸಚಿವರುಗಳ ವಿರುದ್ಧ ಶಾಸಕರ ಪತ್ರ : ಡಿಸಿಎಂ ಡಿಕೆಶಿ ಹೇಳಿದ್ದೆನು..?
ರಾಜ್ಯ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವರುಗಳ ವಿರುದ್ಧ ಶಾಸಕರು ಪತ್ರ ಬರೆದು ದೂರು ನೀಡಿದ್ದಾರೆ ಎಂಬ ವಿಚಾರವನ್ನು ಅಲ್ಲಗಳೆದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಯಾರೂ ಯಾವ ಪತ್ರವನ್ನೂ ಬರೆದಿಲ್ಲ, ಯಾವ ಅಸಮಾಧಾನವೂ ಇಲ್ಲ, ಎಲ್ಲಾ ಊಹಾಪೋಹದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.ನಮ್ಮ 5 ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ಯಾವ ರೀತಿ ತಲುಪಿಸುತ್ತಿದ್ದೇವೆ ಎಂಬ ಬಗ್ಗೆ ಶಾಸಕರಿಗೆ ಗೈಡ್ ಲೈನ್ಸ್ ಕೊಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ನಮ್ಮ ಯೋಜನೆ ತಲುಪಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇನ್ನು ಎಲ್ಲಾ ಸಚಿವರು ಶಾಸಕರಿಗೆ ಸ್ಪಂದಿಸುತ್ತಿದ್ದಾರೆ. ಯಾವ ದೂರು ಯಾರಿಂದಲೂ ಬಂದಿಲ್ಲ. ಹೆಚ್ಚಿನ ಅನುದಾನದ ಬಗ್ಗೆ ಈ ವರ್ಷ ಸ್ವಲ್ಪ ಕಾಯುವಂತೆ ಹೇಳಿದ್ದೇವೆ ಎಂದರು.ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಅವರವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪತ್ರವನ್ನೂ ಯಾರೂ ಬರೆದಿಲ್ಲ. ಎಲ್ಲ ಊಹಾಪೊಹದ ಮಾತುಗಳು ಎಂದು ಹೇಳಿದರು.