ಖಾನಾಪುರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜನ ಜೀವನ ತತ್ತರಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ಮುಂಗಾರು ಚುರುಕು ಪಡೆದ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕೆಲಸಕ್ಕೆ ಮುಂದಾಗಿದ್ದಾರೆ. ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆಯೇ ಜವರಾಯನ ಅಟ್ಟಹಾಸಕ್ಕೆ ರೈತ ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.
ಪಾಂಡುರಂಗ ಲಾಡಗಾವ್ಕರ್ (68) ಮೃತ ರೈತ. ಮಳೆಯಿಲ್ಲದೇ ಬರದ ಭೀತಿಯಲ್ಲಿದ್ದ ಬೆಳಗಾವಿ ಭಾಗದ ರೈತರಿಗೆ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಡುವಿಲ್ಲದ ಕೃಷಿ ಚಟುವಟಿಕೆಯ ಕೆಲಸ. ಭತ್ತದ ನಾಟಿ ಮಾಡಲು ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆಗೆ ಮುಂದಾಗಿದ್ದ ರೈತ ಪಾಂಡುರಂಗ ಮೇಲೆ ಏಕಾಏಕಿ ಟ್ರ್ಯಾಕ್ಟರ್ ಮಗುಚಿಬಿದ್ದಿದೆ. ರೈತ ಪಾಂಡುರಂಗ ಹೊಲದಲ್ಲಿಯೇ ಸಾವನ್ನಪ್ಪಿದ್ದಾರೆ.
ವರುಣಾರ್ಭಟದ ನಡುವೆಯೇ ರೈತ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ. ಮಣ್ಣಲ್ಲಿ ಸಿಲುಕಿದ ಟ್ರ್ಯಾಕ್ಟರ್ ಏಕಾಏಕಿ ರೈತನ ಮೇಲೆ ಮಗುಚಿದ್ದು, ಸ್ಥಳದಲ್ಲೇ ರೈತ ಮೃತಪಟ್ಟಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.